ADVERTISEMENT

ಕೊಕಟನೂರು ಜಾತ್ರೆ: ‍ಪ್ರಾಣಿ ಬಲಿ ತಡೆಗೆ ದಯಾನಂದ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:04 IST
Last Updated 16 ಡಿಸೆಂಬರ್ 2019, 13:04 IST
ದಯಾನಂದ ಸ್ವಾಮೀಜಿ
ದಯಾನಂದ ಸ್ವಾಮೀಜಿ   

ಬೆಳಗಾವಿ: ‘ಅಥಣಿ ತಾಲ್ಲೂಕಿನ ಕೊಕಟನೂರ ಜಾತ್ರೆಯ ವ್ಯಾಪ್ತಿಯಲ್ಲಿ ನಡೆಯುವ ಪ್ರಾಣಿ ಬಲಿ ಸಂಪೂರ್ಣವಾಗಿ ನಿಷೇಧಿಸಬೇಕು. ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆದರೆ ನ್ಯಾಯಾಂಗ ನಿಂಧನೆ ಪ್ರಕರಣ ದಾಖಲಿಸಲಾಗುವುದು’ ಎಂದುವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಪ್ರಾಣಿ ಬಲಿ ನಿಷೇಧಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೊಕಟನೂರು ಗ್ರಾಮದಲ್ಲಿ ಡಿ.21ರಿಂದ 25ರವರೆಗೆ ನಡೆಯುವ ಯಲ್ಲಮ್ಮ ದೇವಿ ಜಾತ್ರೆಯಲ್ಲಿ ಜಿಲ್ಲಾಡಳಿತ ಪ್ರಾಣಿ ಬಲಿ ತಡೆಯಬೇಕು’ ಎಂದು ಒತ್ತಾಯಿಸಿದರು.

‘ಮೂರು ವರ್ಷಗಳಿಂದ ಕೊಕಟನೂರು ಜಾತ್ರೆಯಲ್ಲಿ ನಡೆಯುವ ಪ್ರಾಣಿ ಬಲಿ ತಡೆಯುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ತಿಳಿಸಲಾಗುತ್ತಿದೆ. ಆದರೆ, ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ. ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿಯೇ ಪ್ರಾಣಿ ಬಲಿ ನೀಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘1959ರ ಕರ್ನಾಟಕ ಪ್ರತಿಬಂಧಕ ಕಾನೂನು ಮತ್ತು ರಾಜ್ಯ ಹೈಕೋರ್ಟ್‌ ಆದೇಶಗಳ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಸಂಪ್ರದಾಯದ ಹೆಸರಲ್ಲಿ ಪ್ರಾಣಿ ಬಲಿ ನಡೆಯುತ್ತಿದೆ. ‌ಖಾನಾಪುರ ತಾಲ್ಲೂಕಿನ ಕಕ್ಕೇರಿಯಲ್ಲಿಯ ಭಿಷ್ಠಾದೇವಿಯ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆದ ರೀತಿಯಲ್ಲಿ ಕೊಕಟನೂರಿನಲ್ಲೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋವುಗಳ ರಕ್ಷಣೆಗೆ ಗೋಶಾಲೆ ತೆರೆಯಬೇಕು. ಜತೆಗೆ ಅಲ್ಲಿಯೇ 5 ಎಕರೆ ಜಾಗವನ್ನು ರಾಜ್ಯ ಸರ್ಕಾರ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

‘ಜನ ಜಾಗೃತಿಗಾಗಿ ಪ್ರಾಣಿದಯಾ ಸಂದೇಶ ಯಾತ್ರೆ ನಡೆಸುವ ಮೂಲಕ ಪ್ರಾಣಿ ಬಲಿ ನಿಲ್ಲಿಸಿ, ಅಹಿಂಸಾತ್ಮಕ ಸಾತ್ವಿಕ ಪೂಜೆ ಸಲ್ಲಿಸುವಂತೆ ಭಕ್ತರಿಗೆ ಹಾಗೂ ದೇವಾಲಯದ ಮಂಡಳಿಗೆ ವಿನಂತಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.