ADVERTISEMENT

ಬಾಲ್ಯವಿವಾಹಕ್ಕೆ ಕಡಿವಾಣ: ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:06 IST
Last Updated 25 ಫೆಬ್ರುವರಿ 2020, 12:06 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನ ಕುರಿತ ವಿಭಾಗಮಟ್ಟದ ಕಾರ್ಯಾಗಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ  ಉದ್ಘಾಟಿಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನ ಕುರಿತ ವಿಭಾಗಮಟ್ಟದ ಕಾರ್ಯಾಗಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ  ಉದ್ಘಾಟಿಸಿದರು   

ಬೆಳಗಾವಿ: ‘ಇಂದಿನ ಅತ್ಯಾಧುನಿಕ ಯುಗದಲ್ಲೂ ಬಾಲ್ಯವಿವಾಹಗಳು ತೆರೆಮರೆಯಲ್ಲಿ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಇದಕ್ಕೆ ಕಡಿವಾಣ ಹಾಕಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳವಾರ ಆಯೋಜಿಸಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ ಅನುಷ್ಠಾನ ಕುರಿತ ಬೆಳಗಾವಿ ವಿಭಾಗಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲ್ಯವಿವಾಹ ಸಮಾಜಕ್ಕೆ ಅಂಟಿದ ಕಳಂಕ. ಅಕ್ಷರ ಕಲಿಯಬೇಕಾದ ವಯಸ್ಸಿನಲ್ಲೇ ವಿವಾಹ ಮಾಡುವುದರಿಂದ ಬಾಲಕಿಯರ ಭವಿಷ್ಯವೇ ಕಮರಿ ಹೋಗುತ್ತದೆ. ಈ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಡಬೇಕು. ಕಾನೂನನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಮಹಿಳೆಯರು ಮತ್ತು ಮಕ್ಕಳನ್ನು ಅಕ್ರಮವಾಗಿ ಸಾಗಣೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರ ರಚಿಸಿರುವ ಮಕ್ಕಳ ಕಾವಲು ಸಮಿತಿ ಕ್ರಿಯಾಶೀಲಗೊಳಿಸಬೇಕು. ಮೌಢ್ಯ ಆಚರಣೆಗಳಿಂದ ಜನರನ್ನು ಹೊರತಂದು, ಬಾಲ್ಯವಿವಾಹದಿಂದ ದೂರ ಉಳಿಯುವಂತೆ ಪ್ರೇರಣೆ ನೀಡಬೇಕು. ಸರ್ಕಾರದ ಸುತ್ತೋಲೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅನುಷ್ಠಾನಕ್ಕೆ ತರಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಮೇಲ್ವಿಚಾರಕರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ, ಸಭೆಗಳನ್ನು ನಡೆಸಬೇಕು’ ಎಂದು ನಿರ್ದೇಶನ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಕೆ.ಎಂ. ರೇವತಿ, ಬೆಂಗಳೂರು ಕೇಂದ್ರ ಕಚೇರಿ ಉಪನಿರ್ದೇಶಕಿ ಕೆ. ಹಲೀಮಾ, ಕೊಪ್ಪಳದ ಯುನಿಸೆಫ್ ಸಂಸ್ಥೆ ಸಮಾಲೋಚಕ ರಾಘವೇಂದ್ರ ಭಟ್ ಇದ್ದರು.

ಉಪ ನಿರ್ದೇಶಕ ಬಸವರಾಜ ವರವಟ್ಟಿ ಸ್ವಾಗತಿಸಿದರು.

ಬಾಲ್ಯವಿವಾಹ ತಡೆಯಲು ಅನುಸರಿಸಬೇಕಾದ ಕ್ರಮಗಳು, ಜನರ ಮನವೊಲಿಕೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು ಮೊದಲಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.