
ಸವದತ್ತಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಒಟ್ಟು 27 ವಾರ್ಡ್‌ಗಳ ಪೈಕಿ ಐದು ವಾರ್ಡ್‌ಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ. ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಪಟ್ಟಣದ ಇತರ ವಾರ್ಡ್‌ಗಳಿಗೂ ಬವಣೆ ತಪ್ಪಿದ್ದಲ್ಲ ಎಂಬುದು ನಾಗರಿಕರ ಗೋಳು.
ಪಟ್ಟಣದ ಮಗ್ಗುಲಲ್ಲೇ ಮಲಪ್ರಭೆ ಹರಿಯುತ್ತಾಳೆ, ನವಿಲುತೀರ್ಥ ಜಲಾಶಯ ಇದೆ ಎಂಬ ಭರವಸೆ ಜನರಿಗೆ ಇದೆ. ಆದರೆ, ಜಲಾಶಯದಲ್ಲೂ ನೀರಿನ ಪ್ರಮಾಣ ದಿನೇದಿನೇ ಕ್ಷೀಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
20 ಬಡಾವಣೆಗಳಲ್ಲಿ ಆದ್ಯತೆ ನೋಡಿಕೊಂಡು ನೀರು ಪೂರೈಸಲಾಗುತ್ತಿದೆ. ಮಲಪ್ರಭೆಯಲ್ಲಿ ನೀರು ಇನ್ನೂ ಇರುವ ಕಾರಣ ಸದ್ಯಕ್ಕೆ ಪರದಾಡುವ ಸ್ಥಿತಿ ಇಲ್ಲ. ಆದರೆ, ಬವಣೆ ಇದೆ. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಕ್ರಮ ವಹಿಸಬೇಕು ಎನ್ನುವುದು ಜನರ ಆಗ್ರಹ.
ಪುರಸಭೆ ವ್ಯಾಪ್ತಿಯ 62 ಬೋರ್‌ವೆಲ್‌ಗಳ ಪೈಕಿ 58ರಲ್ಲಿ ನೀರಿದೆ. ಜಾಕ್‍ವೆಲ್ ಹಾಗೂ ಬೋರ್‌ವೆಲ್‌ಗಳಿಂದ ನೀರು ಪೂರೈಕೆ ನಡೆದಿದೆ. ಏಪ್ರಿಲ್‌ನಲ್ಲಿ ಸಂಕಷ್ಟ ಎದುರಾದರೆ ಟ್ಯಾಂಕರ್ ಮೂಲಕವೂ ನೀರು ಪೂರೈಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
‘ಮಲಪ್ರಭೆಯಲ್ಲಿನ ನೀರು ಉಳಿದೆಡೆ ಸರಬರಾಜಾದರೂ ಮೇ ತಿಂಗಳ ಅಂತ್ಯದವರೆಗೂ ಪಟ್ಟಣ ವ್ಯಾಪ್ತಿಗೆ ಸಾಲುತ್ತದೆ ಎಂದು ಅಂದಾಜಿಸಿದ್ದೇವೆ. ಅನ್ನದಾನೇಶ್ವರಿ ನಗರ, ಕೆಎಚ್‍ಬಿ ಕಾಲೊನಿಗಳಲ್ಲಿ ನೀರಿನ ಸಮಸ್ಯೆ ಇದ್ದು, ಮೂರು ಬೋರ್‌ವೆಲ್ ಗುರುತಿಸಿ ಬಾಡಿಗೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಪುರಸಭೆ ಎಂಜಿನಿಯರ್ ಎಸ್.ವಿ. ದಂಡಿನ ‘ಪ್ರಜಾವಾಣಿ’ಗೆ ತಿಳಿಸಿದರು.
ಪಟ್ಟಣಕ್ಕೆ ನಿತ್ಯ 6.5 ಎಂಎಲ್‍ಡಿ (60.50 ಲಕ್ಷ ಲೀಟರ್) ನೀರು ಬೇಕಿದೆ. ಸದ್ಯ ಐದು ಎಂಎಲ್‍ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದ 1.5 ಎಂಎಲ್‍ಡಿ ಕೊರತೆ ಇದೆ. ಇದನ್ನು ಬೋರ್‌ವೆಲ್ ಮೂಲಕ ಪೂರೈಸಲಾಗುತ್ತಿದೆ.
‘ಹೊಸದಾಗಿ ನಿರ್ಮಿಸುತ್ತಿರುವ ನೀರು ಪೂರೈಕೆ ಯೋಜನೆ ಏಳು ಎಂಎಲ್‍ಡಿ ಸಾಮರ್ಥ್ಯ ಹೊಂದಿದೆ. ಸುಮಾರು 60 ಸಾವಿರ ಜನಸಂಖ್ಯೆಗೆ ಸಾಕಾಗಲಿದೆ’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದ್ದಗಿಮಠ.
ಹುಬ್ಬಳ್ಳಿ– ಧಾರವಾಡ ಅವಳಿ ನಗರ ಸೇರಿದಂತೆ ಇತರೆ ತಾಲ್ಲೂಕುಗಳಿಗೆ ನೀರು ಯಥಾವತ್ತಾಗಿ ಸರಬರಾಜಾಗುತ್ತಿದೆ. ಸ್ಥಳೀಯರಿಗೆ ನೀರು ಉಳಿಸಿಕೊಳ್ಳಬೇಕು ಎಂಬ ಜನರ ಕೂಗಿಗೆ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಮೌನವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.