
ಮೂಡಲಗಿಯಲ್ಲಿ ಓಡಾಡುವ ಬೀದಿ ನಾಯಿಗಳ ಹಿಂಡು
ಮೂಡಲಗಿ: ತಾಲ್ಲೂಕಿನಲ್ಲಿ ಬೀದಿ ನಾಯಿ ಕಡಿತದ ಪ್ರಕರಣ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ನಿತ್ಯ ಆರೇಳು ಜನರು ನಾಯಿ ಕಡಿತಕ್ಕೆ ಒಳಗಾಗಿ, ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾರೆ.
ಮೂಡಲಗಿ ಜತೆಗೆ, ವಿವಿಧ ಗ್ರಾಮಗಳು ಹಾಗೂ ತೋಟಪಟ್ಟಿಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಓಡಾಡುತ್ತಿರುವುದು ಸಾಮಾನ್ಯವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮೂಡಲಗಿಯಲ್ಲಿ ಬೀದಿನಾಯಿ ಕಚ್ಚಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆದರೂ, ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ.
‘ಬೀದಿ ನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದರೆ ಸಾಲದು. ಯೋಜನಾಬದ್ಧವಾಗಿ ಕಾರ್ಯಾಚರಣೆ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
‘ಮೂಡಲಗಿ ಪಟ್ಟಣದಲ್ಲೇ 600ಕ್ಕೂ ಅಧಿಕ ಬೀದಿ ನಾಯಿ ಇವೆ. ವಿವಿಧ ಗ್ರಾಮಗಳಲ್ಲೂ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ನಾಯಿ ಕಡಿತಕ್ಕೆ ಒಳಗಾಗಿ, ಪ್ರತಿ ತಿಂಗಳು 200ಕ್ಕೂ ಹೆಚ್ಚು ಜನರು ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಆಗಮಿಸುತ್ತಾರೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ.
‘ನಾಯಿ ಕಚ್ಚಿದ 24 ಗಂಟೆಯೊಳಗೆ ಲಸಿಕೆ ಹಾಕಿಸಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ರೇಬಿಸ್ ದಾಳಿಯಾಗುತ್ತದೆ’ ಎಂದು ತಜ್ಞವೈದ್ಯ ಡಾ.ಕಿರಣಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.
ನಾಯಿಗಳಿಗೂ ಲಸಿಕೆ: ಇಲ್ಲಿನ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ವಿಶ್ವ ರೇಬಿಸ್ ಮಾಸಾಚರಣೆ ಪ್ರಯುಕ್ತ, ಸಾಕಿದ ಮತ್ತು ಬೀದಿನಾಯಿಗಳಿಗೆ ಉಚಿತವಾಗಿ ರೇಬಿಸ್ ರೋಗನಿರೋಧಕ ಲಸಿಕೆ ಹಾಕಲಾಗುತ್ತಿದೆ.
‘ತಾಲ್ಲೂಕಿನಲ್ಲಿ ಈವರೆಗೆ 900ಕ್ಕೂ ಅಧಿಕ ಸಾಕಿದ ಮತ್ತು ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗಿದೆ’ ಎಂದು ಮೂಡಲಗಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ ತಿಳಿಸಿದರು.

ಬೀದಿ ನಾಯಿ ಕಚ್ಚಿದರೆ ಆಗುವ ಅಪಾಯಗಳ ಬಗ್ಗೆ ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆಡಾ.ಮೋಹನ ಕಮತ, ಸಹಾಯಕ ನಿರ್ದೇಶಕ, ಮೂಡಲಗಿ ಪಶು ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.