ADVERTISEMENT

ನಾಯಿಗಳ ಹಾವಳಿ; ಗಡಿ ಗ್ರಾಮಗಳಲ್ಲಿ ಆತಂಕ

ದಾನವಾಡ, ದತ್ತವಾಡ ಗ್ರಾಮಗಳಲ್ಲಿ ಹಲವರಿಗೆ ಗಾಯ

ಸುಧಾಕರ ಎಸ್.ತಳವಾರ, ಬೆಂಗಳೂರು
Published 23 ಫೆಬ್ರುವರಿ 2021, 14:14 IST
Last Updated 23 ಫೆಬ್ರುವರಿ 2021, 14:14 IST
ಚಿಕ್ಕೋಡಿ ತಾಲ್ಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ದಾನವಾಡ ಗ್ರಾಮದ ವ್ಯಕ್ತಿಯೊಬ್ಬರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿರುವುದು
ಚಿಕ್ಕೋಡಿ ತಾಲ್ಲೂಕಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ದಾನವಾಡ ಗ್ರಾಮದ ವ್ಯಕ್ತಿಯೊಬ್ಬರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿರುವುದು   

ಚಿಕ್ಕೋಡಿ: ತಾಲ್ಲೂಕಿನ ಗಡಿ ಗ್ರಾಮಗಳಿಂದ ಕೂಗಳತೆ ದೂರದಲ್ಲಿರುವ ಮಹಾರಾಷ್ಟ್ರದ ದಾನವಾಡ ಮತ್ತು ದತ್ತವಾಡ ಗ್ರಾಮಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ನಾಯಿ ಕಚ್ಚಿ ತಿಂಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹತ್ತಾರು ಜನರು ಮತ್ತು ಜಾನುವಾರನ್ನೂ ಕಚ್ಚಿ ಗಾಯಗೊಳಿಸಿವೆ.

ತಾಲ್ಲೂಕಿನ ಯಕ್ಸಂಬಾ, ಮಲಿಕವಾಡ, ಯಾದ್ಯಾನವಾಡಿ, ಸದಲಗಾ, ಕಲ್ಲೋಳ ಮೊದಲಾದ ಗ್ರಾಮಗಳಿಂದ ಕೆಲವೇ ಕಿ.ಮೀ. ಅಂತರದಲ್ಲಿರುವ ಮಹಾರಾಷ್ಟ್ರದ ಈ ಹಳ್ಳಿಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಿದ್ದರಿಂದ ಇಲ್ಲಿನ ಗಡಿ ಗ್ರಾಮಸ್ಥರಲ್ಲೂ ಆತಂಕದ ಛಾಯೆ ಮೂಡಿದೆ.

ಇಬ್ಬರ ಬಲಿ: ದತ್ತವಾಡದ ನಿವಾಸಿ ಯಲ್ಲವ್ವ ವಡ್ಡರ (55) ಜ.21ರಂದು ಹೊಲದಿಂದ ಮನೆಗೆ ಮರಳುವಾಗ ನಾಯಿಗಳ ದಾಳಿಗೆ ಬಲಿಯಾಗಿದ್ದಾರೆ. ಫೆ.15ರಂದು ದಾನವಾಡದ ಅಪ್ಪಾಸೋ ಅಂಬುವೆ (65) ಅವರು ನಾಯಿಗಳ ಹಿಂಡು ನಡೆಸಿದ ದಾಳಿಗೆ ಜೀವ ಕಳೆದುಕೊಂಡಿದ್ದಾರೆ. ಅಲ್ಲದೇ, 40ಕ್ಕೂ ಜನ ಮತ್ತು 20ಕ್ಕೂ ಅಧಿಕ ಜಾನುವಾರರನ್ನೂ ಗಾಯಗೊಳಿಸಿವೆ. ಭಾನುವಾರ ನಾಲ್ವರಿಗೆ ಮತ್ತು ಎರಡು ಜಾನುವಾರಿಗೆ ಕಚ್ಚಿವೆ. ಗಾಯಗೊಂಡವರು ದತ್ತವಾಡ, ಶಿರೋಳ, ಜಯಸಿಂಗಪುರ, ಮೀರಜ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ನಾಯಿಗಳನ್ನು ಹಿಡಿಯುವುದಕ್ಕಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಆದರೆ, ಗ್ರಾಮದ ಸುತ್ತಲೂ ಕಬ್ಬಿನ ಗದ್ದೆಗಳು ಇರುವುದರಿಂದ ನಾಯಿಗಳು ಗದ್ದೆಗಳೊಳಗೆ ನುಸುಳಿಕೊಳ್ಳುವುದರಿಂದ ಹಿಡಿಯುವುದು ಕಷ್ಟವಾಗುತ್ತಿದೆ. ಅವು ಒಂಟಿಯಾಗಿ ಹೋಗುವವರನ್ನು ಗರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಹೊಲಗದ್ದೆಗಳಲ್ಲಿ ಕೆಲಸ ಮಾಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಮನೆಗಳಿಂದ ಹೊರಬರಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದ ದಾನವಾಡ ಮತ್ತು ದತ್ತವಾಡ ಹಾಗೂ ರಾಜ್ಯದ ಯಕ್ಸಂಬಾ, ಕಲ್ಲೋಳ, ಮಲಿಕವಾಡ, ಯಾದ್ಯಾನವಾಡಿ, ಸದಲಗಾಗಳ ಮಧ್ಯೆ ಕೇವಲ ದೂಧ್‌ಗಂಗಾ ನದಿ ಮಾತ್ರ ಹರಿದಿದೆ. ನಾಯಿಗಳ ಹಿಂಡು ನದಿ ದಾಟಿ ತಮ್ಮ ಗ್ರಾಮಗಳಿಗೂ ದಾಂಗುಡಿ ಇಟ್ಟರೆ ಗತಿಯೇನು? ಎಂದು ಆತಂಕ ಇಲ್ಲಿನ ಗಡಿ ಗ್ರಾಮಸ್ಥರದಾಗಿದೆ.

‘ದತ್ತವಾಡ ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಲ್ಲಿ ಭೀತಿ ಆವರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಾಯಿಗಳನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಸ್ಥಳೀಯರೂ ಅವರಿಗೆ ಸಾಥ್ ನೀಡುತ್ತಿದ್ದಾರೆ’ ಎಂದು ದತ್ತವಾಡ ಗ್ರಾಮ ಪಂಚಾಯ್ತಿ ಸದಸ್ಯ ರಫೀಕ್ ಮುಲ್ಲಾ ತಿಳಿಸಿದರು.

‘ಆ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನೀಡಿ, ಅರಣ್ಯೊ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಡಬೇಕು. ಈ ಮೂಲಕ ಜನರ ಆತಂಕ ನಿವಾರಿಸಬೇಕು’ ಎಂದು ದಾನವಾಡದ ಸಾಮಾಜಿಕ ಕಾರ್ಯಕರ್ತ ಮಲಗೌಡ ಪಾಟೀಲ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.