ADVERTISEMENT

ರಾಮದುರ್ಗ: ಕತ್ತಲಲ್ಲಿ ಮುಳುಗಿದ ರಾಮದುರ್ಗ!

ಬೀದಿದೀಪಗಳಿಂದ ಆಗದ ಪ್ರಯೋಜನ

ಚನ್ನಪ್ಪ ಮಾದರ
Published 2 ಜುಲೈ 2021, 19:30 IST
Last Updated 2 ಜುಲೈ 2021, 19:30 IST
ರಾಮದುರ್ಗ ಪಟ್ಟಣದ ಕೆಶಿಫ್‌ ರಸ್ತೆ ವಿಭಜಕದಲ್ಲಿ ಅಳವಡಿಸಿರುವ ಕಂಬಗಳಲ್ಲಿ ದೀಪಗಳು ಹಾಳಾಗಿವೆ
ರಾಮದುರ್ಗ ಪಟ್ಟಣದ ಕೆಶಿಫ್‌ ರಸ್ತೆ ವಿಭಜಕದಲ್ಲಿ ಅಳವಡಿಸಿರುವ ಕಂಬಗಳಲ್ಲಿ ದೀಪಗಳು ಹಾಳಾಗಿವೆ   

ರಾಮದುರ್ಗ (ಬೆಳಗಾವಿ ಜಿಲ್ಲೆ): ಇಲ್ಲಿ ಅತ್ಯಾರ್ಷಕ ಅಲಂಕಾರಿಕ ಬದಿ ದೀಪಗಳ ಉದ್ಘಾಟನೆಯ ನಂತರ ಬಹುತೇಕರು ಸೆಲ್ಫಿ ಹಾಗೂ ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದರು. ಅಷ್ಟೊಂದು ಪ್ರಮಾಣದಲ್ಲಿ ಆ ದೀಪಗಳು ಬೆಳಗಿ ಕಂಗೊಳಿಸಿದ್ದವು.

ಆದರೆ, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರಾಸಕ್ತಿಯಿಂದಾಗಿ ದೀಪಗಳು ಬೆಳಗುತ್ತಿಲ್ಲ. ಅವು ಇದ್ದೂ ಇಲ್ಲದಂತಾಗಿದೆ. ಇದರಿಂದ ಪಟ್ಟಣ ಕತ್ತಲಲ್ಲಿ ಮುಳುಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಕೆ–ಶಿಫ್‌ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಪಡಿಸಿದ ನಂತರ ವಿಭಜಕದ ಮಧ್ಯೆ ಅಲಂಕಾರಿಕ ದೀಪಗಳನ್ನು ಅಳವಡಿಸಿ ಪಟ್ಟಣ ಸುಂದರಗೊಳ್ಳುವಂತೆ ಮಾಡಲಾಗಿತ್ತು. ರಸ್ತೆ ಬದಿಗೆ ಇದ್ದ ವಿದ್ಯುತ್‌ಕಂಬಗಳನ್ನು ತೆರವುಗೊಳಿಸಲಾಗಿತ್ತು. ಉದ್ಘಾಟನೆಗೆ ಜನಪ್ರತಿನಿಧಿಗಳು ಉತ್ಸಾಹದಿಂದ ಬಂದು ಜನರಿಂದ ಮನ್ನಣೆ ಪಡೆದುಕೊಂಡಿದ್ದರು.

ADVERTISEMENT

ಅಂಬೇಡ್ಕರ್ ನಗರದಿಂದ ಸಂಗೊಳ್ಳಿ ರಾಯಣ್ಣ ರಸ್ತೆವರೆಗೆ ಅಳವಡಿಸಿದ್ದ ಅಲಂಕಾರಿಕ ರಸ್ತೆ ದೀಪಗಳು ಅದೆಷ್ಟೋ ಜನರಿಗೆ ಖುಷಿ ನೀಡಿದ್ದವು. ಬಳಿಕ ಅವುಗಳ ನಿರ್ವಹಣೆ ಇಲ್ಲದೇ ಪ್ರಯೋಜನಕ್ಕೆ ಬಾರದಂತಾಗಿದೆ. ಕೆಲವು ದೀಪಗಳು ಹಾಳಾಗಿವೆ. ಕೆಲವು ಕಂಬಗಳು ಬಿದ್ದು ಹೋಗಿವೆ.

ಜವಾಬ್ದಾರಿ ಹೊತ್ತಿರುವ ಕೆ–ಶಿಫ್‌ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪುರಸಭೆಯವರು ಇತ್ತ ಗಮನ ನೀಡಿಲ್ಲ. ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತನೆ ಮಾಡುತ್ತಿರುವುದು ಬೇಸರ ತರಿಸಿದೆ ಎನ್ನುತ್ತಾರೆ ಜನರು.

ತೇರ ಬಜಾರ್, ಹುತಾತ್ಮ ಚೌಕ, ಹಳೆ ಬಸ್‌ನಿಲ್ದಾಣ, ಹಳೇ ಪೊಲೀಸ್‌ ಠಾಣೆ, ಮಿನಿ ವಿಧಾನಸೌಧದ ಮುಂದೆ ಅಳವಡಿಸಿರುವ ಹೈಮಾಸ್ಟ್‌ ವಿದ್ಯುತ್‌ ದೀಪಗಳು ಕೂಡ ಕೆಲಸ ನಿಲ್ಲಿಸಿ ಅನೇಕ ತಿಂಗಳುಗಳೇ ಕಳೆದಿವೆ. ಅವುಗಳನ್ನು ದುರಸ್ತಿ ಮಾಡುವ ಗೋಜಿಗೆ ಯಾರೂ ಮುಂದಾಗುತ್ತಿಲ್ಲ.

‘2019ರಲ್ಲಿ ಕೆ–ಶಿಪ್‌ನಿಂದ ಪುರಸಭೆಗೆ ಹಸ್ತಾಂತರಿಸಲಾಗಿದೆ. ನಿರ್ವಹಣೆಗಾಗಿಗುತ್ತಿಗೆದಾರರಿಗೆ ನೀಡಲಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಮಗ್ರಿಗಳ ಪೂರರೈಕೆ ಆಗದೆ ದುರಸ್ತಿ ಮಾಡಲು ಸಾಧ್ಯವಾಗಿಲ್ಲ’ ಎಂದು ಪುರಸಭೆಯ ಸ್ಯಾನಿಟರಿ ಇನ್‌ಸ್ಪೆಕ್ಟರ್‌ ಚಂದನ್ ಪಾಟೀಲ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.