ADVERTISEMENT

ರಾಮದುರ್ಗ: ಶಾಸಕರ ಕಚೇರಿಗೆ ಮುತ್ತಿಗೆ

ಸೂಕ್ತ ಸ್ಥಳಕ್ಕೆ ಬೀದಿಬದಿ ವ್ಯಾಪಾರಿಗಳ ಒತ್ತಾಯ;

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 4:13 IST
Last Updated 9 ಜುಲೈ 2021, 4:13 IST
ಬೀದಿಬದಿಯಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಸೂಕ್ತ ಸ್ಥಳ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರಾಮದುರ್ಗದ ಬೀದಿಬದಿ ವ್ಯಾಪಾರಿಗಳು ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಒತ್ತಾಯಿಸಿದರು
ಬೀದಿಬದಿಯಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಸೂಕ್ತ ಸ್ಥಳ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರಾಮದುರ್ಗದ ಬೀದಿಬದಿ ವ್ಯಾಪಾರಿಗಳು ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಒತ್ತಾಯಿಸಿದರು   

ರಾಮದುರ್ಗ: ತರಕಾರಿ ಮತ್ತು ಹಣ್ಣಿನ ವ್ಯಾಪಾರ ಮಾಡಲು ರಸ್ತೆ ಬದಿಯಲ್ಲಿ ಸೂಕ್ತ ಸ್ಥಳ ವ್ಯವಸ್ಥೆ ಮಾಡಬೇಕು ಎಂದು ಬೀದಿಬದಿ ವ್ಯಾಪಾರಸ್ಥರು ಬುಧವಾರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಆಗ್ರಹಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ಬೀದಿಬದಿಯಲ್ಲಿ ವ್ಯಾಪಾರ ಮಾಡುವುದಕ್ಕೆ ಪೊಲೀಸರು ಆಕ್ಷೇಪ ಮಾಡುತ್ತಿದ್ದಾರೆ. ಸಣ್ಣ ವ್ಯಾಪರಸ್ಥರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಸೂಕ್ತ ಸ್ಥಳ ವ್ಯವಸ್ಥೆ ಮಾಡಿಕೊಡಬೇಕು ಎಂದು ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹುಸೇನಭಾಷಾ ಮಹ್ಮದಲಿ ಒತ್ತಾಯಿಸಿದರು.

ಮನವಿಗೆ ಸ್ಪಂದಿಸಿದ ಶಾಸಕ ಮಹಾದೇವಪ್ಪ ಯಾದವಾಡ, ತೇರಬಜಾರದಲ್ಲಿ ತರಕಾರಿ ಮಾರುವವರು ಸುಗಮ ಸಂಚಾರಕ್ಕೆ ಜಾಗ ಬಿಟ್ಟು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಬೇಕು. ವ್ಯಾಪಾರಸ್ಥರು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ತರಕಾರಿ ಮಾರುವವರಿಗೆ ತಾತ್ಕಾಲಿಕವಾಗಿ ಸ್ಥಳ ಗುರುತು ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳದಲ್ಲಿದ್ದ ಪುರಸಭೆಯ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.

ADVERTISEMENT

ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ ಹಾಗೂ ಉಪಾಧ್ಯಕ್ಷ ರಾಘವೇಂದ್ರ ದೊಡಮನಿ ಅವರು, ಮುಂದಿನ ದಿನಗಳಲ್ಲಿ ಪ್ರತ್ಯೇಕ ತರಕಾರಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದಾಗಿ ಬೀದಿಬದಿ ವ್ಯಾಪಾರಸ್ಥರಿಗೆ ಭರವಸೆ ನೀಡಿದರು.

ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ದಾದಾಪೀರ ಕಲೇಗಾರ, ಫಕೀರಪ್ಪ ಮೇದಾರ, ಶರೀಫ್‌ ಸುರಕೋಡ, ಅಯೂಬ ಖಲೀಫ್, ಗಂಗವ್ವ ಮಾಳಿ, ಹನಮವ್ವ ಅನವಾಲ, ಪರಶುರಾಮ ವಕ್ಕುಂದ, ಮಳೆಪ್ಪ ಬನ್ನಿಗಿಡದ, ಪ್ರಕಾಶ ತೊರಗಲ್ಲ, ಮಂಜುನಾಥ ವರಗಮಾರಿ ಸೇರಿದಂತೆ ನೂರಾರು ಮಹಿಳಾ ವ್ಯಾಪಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.