ADVERTISEMENT

ವಿದ್ಯಾರ್ಥಿಗಳಿಗೆ ಥಳಿಸಿದ ಶಿಕ್ಷಕಿ: ಪೋಷಕರ ಆಕ್ರೋಶ

ಗ್ರಾಮಸ್ಥರ ಆಕ್ರೋಶದ ಪರಿಣಾಮ ಬೇರೆ ಶಾಲೆಗೆ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 14:15 IST
Last Updated 13 ಡಿಸೆಂಬರ್ 2019, 14:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವಂತೆ ಕೋಲಿನಿಂದ ಹೊಡೆದಿದ್ದ ಮತ್ತು ಪೋಷಕರ ಆಕ್ರೋಶಕ್ಕೆ ಗುರಿಯಾಗಿದ್ದ ಹುಕ್ಕೇರಿ ತಾಲ್ಲೂಕು ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಅರ್ಚನಾ ಸಾಗರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಚಿಕ್ಕೋಡಿ ತಾಲ್ಲೂಕಿನ ಶಾಲೆಗೆ ನಿಯೋಜನೆ ಮಾಡಲಾಗಿದೆ.

ವಿಜ್ಞಾನ ವಿಷಯದ ಈ ಶಿಕ್ಷಕಿಯು ಮಕ್ಕಳಿಗೆ ಮನಬಂದಂತೆ ಹೊಡೆಯುತ್ತಿದ್ದ ವಿಷಯ ತಿಳಿದು ಹೋದ ವಾರ ಎಸ್‌ಡಿಎಂಸಿಯವರು, ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ದೂರು ಬಂದಿದ್ದರಿಂದ ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಬಿಇಒ ಮೋಹನ ದಂಡಿನ ಎಚ್ಚರಿಕೆ ನೀಡಿದ್ದರು ಹಾಗೂ ನೋಟಿಸ್‌ ಕೂಡ ಜಾರಿಗೊಳಿಸಿದ್ದರು. ಬಳಿಕ ಶಿಕ್ಷಕಿ ಎಸ್‌ಡಿಎಂಸಿ ಸಭೆಯಲ್ಲಿ ಕ್ಷಮೆಯನ್ನೂ ಯಾಚಿಸಿದ್ದರು.

11 ವರ್ಷಗಳಿಂದಲೂ ಅದೇ ಶಾಲೆಯಲ್ಲಿ ಕಾರ್ಯನಿರ್ವಸುತ್ತಿರುವ ಅವರು, ‘ಮಕ್ಕಳು ಬಹಳ ಗಲಾಟೆ ಮಾಡುತ್ತಿದ್ದುದ್ದರಿಂದ ಹೊಡೆದಿದ್ದೆ. ಇನ್ಮುಂದೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇನೆ’ ಎಂದು ತಿಳಿಸಿದ್ದರು. ಆದರೆ, ಅವರು ವಿದ್ಯಾರ್ಥಿಗಳಿಗೆ ಹೊಡೆದಿದ್ದ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ವೈರಲ್‌ ಆಗಿತ್ತು. ಗ್ರಾಮಸ್ಥರು, ಅವರನ್ನು ಅಮಾನತುಪಡಿಸಬೇಕು ಎಂದು ಆಗ್ರಹಿಸಿದ್ದರು. ಇದನ್ನು ಆಧರಿಸಿ ಶಿಕ್ಷಕಿ ವಿರುದ್ಧ ವಿಚಾರಣೆ ಕಾಯ್ದಿರಿಸಿ, ಬೇರೆ ಕಡೆಗೆ ನಿಯೋಜಿಸಿ ಶಿಸ್ತುಕ್ರಮ ಜರುಗಿಸಲಾಗಿದೆ.

ADVERTISEMENT

‘ಶಾಲೆಗೆ ಭೇಟಿ ನೀಡಿ ಮಕ್ಕಳು, ಎಸ್‌ಡಿಎಂಸಿಯವರಿಂದ ಮಾಹಿತಿ ಪಡೆದಿದ್ದೇನೆ. ಶಿಕ್ಷಕಿಯು ಮಕ್ಕಳಿಗೆ ಹೊಡೆದಿರುವುದು ಕಂಡುಬಂದಿದೆ. ಇದನ್ನು ಆಧರಿಸಿ ಡಿಡಿಪಿಐ ಅವರಿಗೆ ವರದಿ ಸಲ್ಲಿಸಿದ್ದೇನೆ. ಪ್ರಸ್ತುತ ತರಬೇತಿಯಲ್ಲಿರುವ ಶಿಕ್ಷಕಿಯನ್ನು ಸದ್ಯ ಬೇರೆ ಶಾಲೆಗೆ ನಿಯೋಜಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ’ ಎಂದು ಹುಕ್ಕೇರಿ ಬಿಇಒ ಮೋಹನ ದಂಡಿನ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.