ADVERTISEMENT

ಕಾತ್ರಾಳ ಶಾಲೆಯಲ್ಲಿ ದಾಖಲಾತಿ ಹೆಚ್ಚಳ

ಶತಮಾನೋತ್ಸವ ಹೊಸ್ತಿಲಲ್ಲಿರುವ ಸರ್ಕಾರಿ ಶಾಲೆ

ಸಿದ್ದಯ್ಯ ಹಿರೇಮಠ
Published 4 ಜನವರಿ 2019, 20:00 IST
Last Updated 4 ಜನವರಿ 2019, 20:00 IST
ಕಾತ್ರಾಳ ಶಾಲೆಯಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಇರುವುದು
ಕಾತ್ರಾಳ ಶಾಲೆಯಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಇರುವುದು   

ಮೋಳೆ: ಅಥಣಿ ತಾಲ್ಲೂಕಿನ ಹಿಂದುಳಿದ ಕಾತ್ರಾಳ ಗ್ರಾಮದ ಕನ್ನಡ ಗಂಡು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿರುವುದು ಗಮನಸೆಳೆಯುತ್ತಿದೆ.

ಮುಳಗಡೆ ಪ್ರದೇಶವಾಗಿರುವ ಇದು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಆದರೆ, ಶಾಲೆ ಪ್ರಗತಿಯಲ್ಲಿದೆ. ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರುವ ಪರಿಣಾಮ, ಮಕ್ಕಳು ಮರಳಿ ಶಾಲೆಗೆ ಸೇರುತ್ತಿದ್ದಾರೆ.

1924ರಲ್ಲಿ ಹನುಮಾನ್‌ ಮಂದಿರದಲ್ಲಿ ಪ್ರಾರಂಭವಾದ ಈ ಶಾಲೆ 1996ರವರೆಗೆ 1ರಿಂದ 4ನೇ ತರಗತಿ ಹೊಂದಿತ್ತು. ಶಿಕ್ಷಣ ಪ್ರೇಮಿಗಳು ಆದ ಚೋರಮುಲೆ ಬಂಧುಗಳು ಎಕರೆ ಜಾಗ ದಾನ ನೀಡಿದರು. 2011–12ರಲ್ಲಿ 7ನೇ ತರಗತಿವರೆಗೆ ಅನುಮತಿ ದೊರೆಯಿತು. ಪ್ರಸಕ್ತ ಸಾಲಿನಲ್ಲಿ 8ನೇ ತರಗತಿಗೆ ಮಂಜೂರಾತಿ ಸಿಕ್ಕಿದೆ.

ADVERTISEMENT

ಪುರಸ್ಕಾರ: ಕೆಲವೇ ಮಕ್ಕಳೊಂದಿಗೆ ಪ್ರಾರಂಭವಾದ ಈ ಶಾಲೆಯಲ್ಲಿ ಈಗ 207 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 2015–16ರಲ್ಲಿ ಗುಣಮಟ್ಟ ಮೌಲ್ಯಂಕನದಲ್ಲಿ ‘ಎ’ ಗ್ರೇಡ್ ಪಡೆದಿದೆ. 2017–18ರಲ್ಲಿ ಸ್ವಚ್ಛ ವಿದ್ಯಾಲಯ ಪುರಸ್ಕಾರ ಗಳಿಸಿದೆ. ಮಕ್ಕಳು ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ.

5 ಕೊಠಡಿಗಳಿವೆ. ಶೌಚಾಲಯಗಳಿವೆ. ಕುಡಿಯುವ ನೀರು, ಮೈದಾನ, ಉದ್ಯಾನ, ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ, ಬಿಸಿಯೂಟ ವ್ಯವಸ್ಥೆ ಇದೆ. ಇದೆಲ್ಲದರಿಂದಾಗಿ ಮಕ್ಕಳ ಕಲಿಕಾ ಮಟ್ಟ ಸುಧಾರಿಸುತ್ತಿದೆ.

‘ಮಕ್ಕಳ ದಾಖಲಾತಿ ಹೆಚ್ಚಿಸಲು ಗ್ರಾಮಸ್ಥರ ಸಹಕಾರ ಪಡೆಯಲಾಗುತ್ತಿದೆ. ಪೋಷಕರ ಸಭೆ ನಡೆಸಿ ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿ ನಡೆಸಲಾಗುತ್ತಿದೆ. ಬಿಸಿಯೂಟದ ಮೂಲಕ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ’ ಎಂದು ಮುಖ್ಯಶಿಕ್ಷಕ ಸಂಜೀವ ಕೋಳಿ ತಿಳಿಸಿದರು.

ಪಠ್ಯೇತರ ಚಟುವಟಿಕೆ:‘ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಲಾಗಿದೆ. ಪ್ರಬಂಧ, ಭಾಷಣ, ಸಂಗೀತ, ಚರ್ಚೆ, ಸಾಮಾನ್ಯ ಜ್ಞಾನ ಹಾಗೂ ವಿಷಯವಾರು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಮಾನವ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎನ್ನುತ್ತಾರೆ ಅವರು.

ತೆಂಗು, ಮಾವು, ಕರಿಬೇವು ಹಾಕಲಾಗಿದೆ. ಅಲಂಕಾರಿಕ ಹೂವಿನ ಸಸಿಗಳನ್ನು ಬೆಳೆಸಲಾಗುತ್ತಿದೆ. ಇದರಿಂದ ಅಲ್ಲಿನ ವಾತಾವರಣ ಕಂಗೊಳಿಸುತ್ತಿದೆ. ಕಬಡ್ಡಿ, ವಾಲಿಬಾಲ್, ಕೊಕ್ಕೊ ಮೈದಾನವಿದೆ. ವಾರ್ಷಿಕ ಸ್ನೇಹ ಸಮ್ಮೇಳನ, ಶೈಕ್ಷಣಿಕ ಪ್ರವಾಸ ಆಯೋಜಿಸಲಾಗುತ್ತಿದೆ.

ತಾಲ್ಲೂಕು ಪಂಚಾಯ್ತಿ ಸದಸ್ಯೆ ಶೋಭಾ ಸುಖದೇವ ಭಂಡಗರ, ಎಸ್‌ಡಿಎಂಸಿ ಅಧ್ಯಕ್ಷ ಸಂಜಯ ಮುಧವಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಬಸವರಾಜ ಮುಧವಿ, ರವಿ ಶಿಂಧೆ, ಶ್ರೀಕಾಂತ ಮಾದರ, ವಸಂತ ಬಂಡಗರ, ರಾಮ ಯಂಡೋಳ್ಳಿ, ಬಾಳು ವಗರೆ, ಗ್ರಾಮಸ್ಥರು ಹಾಗೂ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕರು.

‘ಕುಗ್ರಾಮದ ಶಾಲೆಯಲ್ಲಿ ಶಿಕ್ಷಕರು ಮಕ್ಕಳ ದಾಖಲಾತಿ ಹೆಚ್ಚಿಸುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವುದು ಮೆಚ್ಚುವಂಥದು’ ಎಂದು ಕಾಗವಾಡ ಬಿಇಒ ಎ.ಎಸ್. ಜೊಡಗೇರಿ ಹೇಳಿದರು.

*
ಹಿಂದುಳಿದ ವರ್ಗದವರು ಹಾಗೂ ಬಡ ವಿದ್ಯಾರ್ಥಿಗಳೇ ಕಲಿಯುತ್ತಿರುವ ನಮ್ಮ ಶಾಲೆಯು ಎಲ್ಲರ ಸಹಕಾರದಿಂದ ಬೆಳೆಯುತ್ತಿದೆ.
–ಸಂಜೀವ ಕೋಳಿ, ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.