ADVERTISEMENT

ಚಂದರಗಿ ಕ್ರೀಡಾಶಾಲೆ ಆವರಣದಲ್ಲಿ ವಿದ್ಯಾರ್ಥಿಗಳ ಜಗಳ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 14:30 IST
Last Updated 18 ಆಗಸ್ಟ್ 2022, 14:30 IST

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಚಂದರಗಿ ಕ್ರೀಡಾಶಾಲೆ ಆವರಣದಲ್ಲಿ ಬುಧವಾರ ಕಬಡ್ಡಿ ಆಟದ ಸಂಬಂಧವಾಗಿ ಚಂದರಗಿ ಹಾಗೂ ಕಟಕೋಳ ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದೆ. ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಶಾಲೆ ವತಿಯಿಂದ ಗುರುವಾರ ದೂರು ದಾಖಲಿಸಲಾಗಿದೆ.

ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದ ಕಬಡ್ಡಿಯಲ್ಲಿ ಪ್ರಾಮಾಣಿಕ ತೀರ್ಪು ನೀಡಿಲ್ಲ ಎಂದು ಒಂದು ತಂಡದ ಹುಡುಗರು ತಕರಾರು ತೆಗೆದರು. ಇದಕ್ಕೆ ವಿರುದ್ಧವಾಗಿ ಇನ್ನೊಂದು ತಂಡದ ಹುಡುಗರೂ ಏರುಧ್ವನಿಯಲ್ಲಿ ಮಾತನಾಡಲು ಶುರು ಮಾಡಿದರು. ಆಗ ಆಟ ನೋಡಲು ಬಂದಿದ್ದ ಕೆಲವು ಹುಡುಗರು ಎರಡೂ ಗುಂಪುಗಳ ಪರವಾಗಿ ಜಗಳಕ್ಕೆ ನಿಂತರು. ಕೆಲವರು ಕೈಯಲ್ಲಿ ಬಡಿಗೆ ತೆಗೆದುಕೊಂಡು ವಿರೋಧಿ ಗುಂಪಿನವರ ಮೇಲೆ ಹಲ್ಲೆಗೆ ಮುಂದಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಎಲ್ಲರನ್ನೂ ಬೆದರಿಸಿ ಕಳುಹಿಸಿದರು. ಈ ಜಗಳದ ವಿಡಿಯೊ ತುಣುಕುಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಹೀಗಾಗಿ, ಕ್ರೀಡಾಶಾಲೆಯಿಂದ ದೂರು ದಾಖಲಿಸಲಾಯಿತು. ದೂರಿನಲ್ಲಿ ಯಾರ ಹೆಸರೂ ಬರೆದಿಲ್ಲ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಷೇತ್ರಶಿಕ್ಷಣಾಧಿಕಾರಿ ನಿಂಗಪ್ಪ ಕುಂದರಗಿ, ‘ಘಟನೆಯು ಕ್ರೀಡೆ ಮುಗಿದ ಬಳಿಕ ಮೈದಾನದ ಹೊರಗೆ ನಡೆದಿದೆ. ಹಾಗಾಗಿ, ಡಿಡಿಪಿಐ ಅವರಿಗೆ ವರದಿ ನೀಡಲಾಗುವುದು’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.