
ಯಮಕನಮರಡಿ: ‘ಕರ್ನಾಟಕ ಗಡಿಭಾಗದ ರೈತರು ತಮ್ಮ ಕಬ್ಬುಗಳನ್ನು ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕಳಿಸಬಾರದು. ಇನ್ನೂ ಐದು ದಿನದಲ್ಲಿ ಪ್ರತಿ ಟನ್ ಕಬ್ಬಿಗೆ ₹3,600, ₹3,700 ಆಗಲಿದೆ. ನಮ್ಮ ಜೊತೆ ತಾವು ಕೈ ಜೋಡಿಸಿದರೆ ತಮಗೂ ಲಾಭ ಆಗುವುದು’ ಎಂದು ಮಹಾರಾಷ್ಟ್ರದ ರೈತ ಸಂಘಟನೆಯ ಅಧ್ಯಕ್ಷ ರಾಜು ಶೆಟ್ಟಿ ಬಣದ ರೈತ ಮುಖಂಡ ರಾಜು ಗಡ್ಡೆನವರ ಹೇಳಿದರು.
ಸ್ಥಳೀಯ ಹತ್ತರಗಿಯಲ್ಲಿ ಸೋಮವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದರು.
‘ಕರ್ನಾಟಕ ಗಡಿಭಾಗದ ಕಾರ್ಖಾನೆಯವರು ಇನ್ನೂ ಹೆಚ್ಚಿನ ದರ ನಿಗದಿಪಡಿಸುವ ನಿರೀಕ್ಷೆಯಿದೆ. ರೈತರು ಕಬ್ಬು ಕಳಿಸಲು ಆತುರ ಪಡಬೇಡಿ. ಒಂದು ವೇಳೆ ಮಹಾರಾಷ್ಟ್ರದ ಕಾರ್ಖಾನೆಗಳು ₹3,700 ನಿಗದಿಪಡಿಸಿದರೆ ಕಳುಹಿಸಿ’ ಎಂದರು.
ಹತ್ತರಗಿ ಸುಕ್ಷೇತ್ರದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಕರ್ನಾಟಕದ ಕಬ್ಬಿನಲ್ಲಿ ರೀಕವರಿ ಕಡಿಮೆ ಇದೆ. ಆದರೆ ಮಹಾರಾಷ್ಟ್ರದ ಕಬ್ಬಿನ ರೀಕವರಿ ಹೆಚ್ಚಿಗೆ ಇದೆ. ಆದ್ದರಿಂದ 14 ತಿಂಗಳ ನಂತರ ಕಬ್ಬು ಕಾರ್ಖಾನೆಗೆ ಕಳಿಸಿದರೆ ನಿಮ್ಮ ಕಬ್ಬಿಗೆ ರೀಕವರಿ ಹೆಚ್ಚಿಗೆ ಬರುತ್ತದೆ. ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಸಕ್ಕರೆ ಕಾರ್ಖಾನೆಗಳು ನಿಗದಿ ಬೆಲೆ ಕಡಿಮೆ ನೀಡುವುದರಿಂದ ಅಲ್ಲಿ ರೈತ ಸಂಘಟನೆಯುವರು ನ.14 ಅಥವಾ 15ರಂದು ಕಬ್ಬಿನ ಬೆಲೆ ನಿಗದಿ ಮಾಡುವಂತೆ ಪ್ರತಿಭಟನೆ ಮಾಡಲಿದ್ದಾರೆ. ಇದರಿಂದ ಅಲ್ಲಿ ಕಬ್ಬಿನ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ನೀವು ಕೂಡ ಆ ಪ್ರತಿಭಟನೆಯಲ್ಲಿ ಭಾಗಿಯಾಗಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.