ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿ ಹಾಗೂ ರಿಕವರಿಗೆ ಸಂಬಂಧಿಸಿದಂತೆ, ಇಲ್ಲಿನ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಗುರುವಾರ ನಡೆದ ಸಭೆ ಗೊಂದಲ ಗೂಡಾಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಕಾರ್ಖಾನೆಗಳ ಆಡಳಿತ ಮಂಡಳಿಗಳ ಜತೆಗೆ ರೈತರು ತೀವ್ರ ವಾಗ್ವಾದ ನಡೆಸಿದರು. ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಲಕಾಲ ಪ್ರತಿಭಟನೆ ಕೂಡ ಮಾಡಿದರು.
‘ಜಿಲ್ಲೆಯ ಎಲ್ಲ 26 ಸಕ್ಕರೆ ಕಾರ್ಖಾನೆಗಳೂ ಈಗ ಕಬ್ಬು ಹಂಗಾಮು ಆರಂಭಿಸಿವೆ. ಕೆಲವೇ ದಿನಗಳಲ್ಲಿ ಕಬ್ಬು ನುರಿಸಲು ಶುರು ಮಾಡುತ್ತವೆ. ಆದರೆ, ಇದೂವರೆಗೂ ಯಾವುದೇ ಕಾರ್ಖಾನೆ ನಿಗದಿತ ದರ ಘೋಷಣೆ ಮಾಡಿಲ್ಲ. ಜಿಲ್ಲಾಡಳಿತ ಅಥವಾ ಸಕ್ಕರೆ ಸಂಸ್ಥೆಯು ಈ ವಿಚಾರದಲ್ಲಿ ಯಾವುದೇ ಕ್ರಮ ವಹಿಸಿಲ್ಲ’ ಎಂದು ಕೆಲವು ರೈತರು ಸಭೆಯ ಆರಂಭಕ್ಕೇ ಆಕ್ರೋಶ ಹೊರಹಾಕಿದರು.
‘ಈಗಾಗಲೇ ಕೇಂದ್ರ ಸರ್ಕಾರ ಎಫ್‌ಆರ್‌ಪಿ ದರ ಘೋಷಣೆ ಮಾಡಿದೆ. ಆದರೆ, ಕಾರ್ಖಾನೆಗಳು ಸಕ್ಕರೆ ಅಂಶ (ರಿಕವರಿ) ಬಹಿರಂಗ ಪಡಿಸುತ್ತಿಲ್ಲ. ಕಳೆದ ಸಾಲಿನಲ್ಲಿ ಟನ್ ಕಬ್ಬಿಗೆ ₹3,500 ದರ ಘೋಷಣೆ ಮಾಡಲಾಗಿದ್ದರೂ ಕಾರ್ಖಾನೆಗಳು ₹3,000 ಮಾತ್ರ ನೀಡಿವೆ. ಈ ವರ್ಷ ದರ ನಿಗದಿ ಮಾಡುವವರೆಗೂ ಕಬ್ಬು ನುರಿಸಲು ಅನುಮತಿ ಕೊಡಬಾರದು’ ಎಂದು ಪಟ್ಟು ಹಿಡಿದರು.
‘ಮಹಾರಾಷ್ಟ್ರದಲ್ಲಿ ಕಾರ್ಖಾನೆಗಳು ₹3,450 ದರ ನೀಡುತ್ತಿವೆ. ಅಲ್ಲಿಗಿಂತ ಉತ್ತಮ ಕಬ್ಬು ನಮ್ಮಲ್ಲಿ ಬೆಳೆಯುತ್ತದೆ. ಕರ್ನಾಟಕದಲ್ಲಿ ಮಾತ್ರ ಏಕೆ ದರ ಪರಿಷ್ಕರಣೆ ಮಾಡುತ್ತಿಲ್ಲ. ಇದರಲ್ಲಿ ಏನು ಹುನ್ನಾರವಿದೆ’ ಎಂದೂ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಪ್ರಸಕ್ತ ವರ್ಷದಿಂದ ಟನ್ ಕಬ್ಬಿಗೆ ₹50 ಹೆಚ್ಚು ಮಾಡುವಂತೆ ನಿರ್ದೇಶನ ನೀಡಲಾಗುವುದು ಎಂದರು. ಇದರಿಂದ ಕೋಪಗೊಂಡ ರೈತರು, ರೈತರಿಗೆ ಭಿಕ್ಷೆ ನೀಡುತ್ತಿದ್ದೀರೇ? ಕನಿಷ್ಠ ₹300 ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದರು.
ಆಗ ಸಭೆಯಲ್ಲಿ ಗದ್ದಲ ಉಂಟಾಯಿತು. ಅಧಿಕಾರಿಗಳನ್ನು ಒಳಗಡೆಯೇ ಕೂಡಿಹಾಕಿ ಹೊರಬಂದ ರೈತರು ಆವರಣದಲ್ಲಿ ಘೋಷಣೆ ಮೊಳಗಿಸಿದರು.
ಸ್ಥಳಕ್ಕೆ ಧಾವಿವಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರೈತರನ್ನು ಸಮಾಧಾನ ಮಾಡಿದರು. ಕತ್ತಲಾದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಯಿತು.
ಕಬ್ಬಿಗೆ ಕಳೆದ ಬಾರಿ ₹3000 ನೀಡಲಾಗಿದ್ದು ಈ ಬಾರಿ ₹50 ಹೆಚ್ಚಿಗೆ ಮಾಡಿ ನೀಡಲು ನಿರ್ದೇಶನ ಕೊಡಲಾಗಿದೆಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ
‘ಕಬ್ಬಿನ ದರ ಹೆಚ್ಚಳ ಕಾರ್ಖಾನೆಗಳಿಂದ ಬಾಕಿ ಬಿಲ್ ಬಿಡುಗಡೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಕ್ಕರೆ ಆಯುಕ್ತರೊಂದಿಗೆ ಅ. 17ರಂದು ಸಭೆ ನಡೆಸಲಾಗುವುದು. ಈ ಸಭೆಗೆ ಆಯ್ದ ರೈತರು ಆಗಮಿಸಬೇಕು. ಅದಕ್ಕಾಗಿ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗುವುದು. ಅಂದಿನ ಸಭೆಯಲ್ಲಿ ರೈತರು ತಮ್ಮ ಅಭಿಪ್ರಾಯ ಸಲ್ಲಿಸಬಹುದು’ ಎಂದು ಜಿಲ್ಲಾಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
‘ಕಳೆದ ವರ್ಷವೇ ಎಪಿಎಂಸಿಯಿಂದ ವೇಬ್ರಿಜ್ ನಿರ್ಮಿಸಲು ಸೂಚಿಸಲಾಗಿದೆ. ಈವರೆಗೂ ಕಾರ್ಖಾನೆಗಳು ಸ್ಥಾಪನೆ ಮಾಡಲು ಕ್ರಮ ಕೈಗೊಂಡಿಲ್ಲ. ಇದಕ್ಕೆ ಕಾರಣವೇನು’ ಎಂದೂ ಜಿಲ್ಲಾಕಾರಿ ಸಭೆಯಲ್ಲಿ ಪ್ರಶ್ನಿಸಿದರು. ‘ಡಿಜಿಟಲ್ ತೂಕ ಅಳವಡಿಸಿಕೊಳ್ಳುವ ಮೂಲಕ ಕಾರ್ಖಾನೆಗಳು ಪಾರದರ್ಶಕವಾಗಿ ಕಬ್ಬಿನ ತೂಕ ಮಾಡಬೇಕು. ದೂರು ಬಂದಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.