
ಚನ್ನಮ್ಮನ ಕಿತ್ತೂರು: ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡುವ ರೈತರ ಕಬ್ಬು ತೂಕದಲ್ಲಿಯ ಮೋಸ ಇನ್ನೂ ನಿಂತಿಲ್ಲ. ಈ ಮೋಸದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಸ್ವಾಮೀಜಿಗಳು ಹಾಗೂ ರೈತ ಮುಖಂಡರು ನಿರ್ಧರಿಸಿದರು.
ತಾಲ್ಲೂಕಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸ್ವಾಮೀಜಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸಾನ್ನಿಧ್ಯ ವಹಿಸಿದ್ದ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಕಬ್ಬಿನ ತೂಕದಲ್ಲಿ ಮೋಸ ಮಾಡಲು ಕಾರ್ಖಾನೆಯವರಿಗೆ ಸ್ವಾಮೀಜಿ ಅಥವಾ ರೈತರು ಎಂಬ ಭೇದವಿಲ್ಲ. ನಾನು ಕಳಿಸಿದ ಕಬ್ಬನ್ನು ತೂಕದಲ್ಲಿ ಹೊಡೆಯುತ್ತಾರೆ’ ಎಂದು ದೂರಿದರು.
ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ‘ಲಾರಿ ತೂಕದಲ್ಲಿ ಆರು ಸಾವಿರ ಮೌಲ್ಯದ ಎರಡು ಟನ್ ಕಬ್ಬು ಹೊಡೆದು ₹200 ಕೊಟ್ಟರೆ ಏನು ಬಂತು’ ಎಂದು ಪ್ರಶ್ನಿಸಿದರು.
‘ಎಪಿಎಂಸಿ ತೂಕದ ಸೇತುವೆಯಲ್ಲಿ ರೈತರು ಕಬ್ಬು ತೂಕ ಮಾಡಬೇಕು. ಕಡಿಮೆ ಬಂದರೆ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಹೋರಾಟದಲ್ಲಿ ನಾವೂ ಪಾಲ್ಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.
ರೈತ ಮುಖಂಡ ಇಂಗಳಗುಪ್ಪೆ ಕೃಷ್ಣೇಗೌಡ ಮಾತನಾಡಿ, ‘ಸಮೀರವಾಡಿಯಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ರೈತರು ಈ ರೀತಿ ಮಾಡುವುದಿಲ್ಲ. ಬೆಂಕಿ ಹಚ್ಚಿದವರ ಮನೆ ಹಾಳಾಗಿ ಹೋಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಮೆಹಬೂಬ ನವಲಗುಂದ ಮಾತನಾಡಿ, ‘ಕಬ್ಬಿನ ತೂಕದಲ್ಲಿ ಮಾತ್ರ ರೈತರಿಗೆ ಮೋಸ ಆಗುತ್ತಿಲ್ಲ. ಸೋಯಾಬೀನ್, ಗೋವಿನಜೋಳ ಸೇರಿ ಕೆಲವು ಬೆಳೆಗಳಲ್ಲಿ ಕ್ವಿಂಟಲ್‌ಗೆ ಆರು ಕೆ.ಜಿ ಮೋಸ ಮಾಡುತ್ತಿದ್ದಾರೆ. ವರ್ತಕರಿಗೆ , ಕಾರ್ಖಾನೆ ಮಾಲೀಕರಿಗೆ ಅನುಕೂಲವಾಗುವ ಕಾಯ್ದೆ ಸರ್ಕಾರ ತಂದಿದೆ. ಹಾಗಾಗಿ ಸರ್ಕಾರದ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ರೂಪಿಸಬೇಕಿದೆ’ ಎಂದರು.
ಮುಖಂಡರಾದ ನಿಂಗಪ್ಪ ತಡಕೋಡ, ಶಿವನಸಿಂಗ್ ಮೊಕಾಶಿ, ಬೀರಪ್ಪ ದೇಶನೂರ, ಬಸವರಾಜ ಮೊಕಾಶಿ, ಮಲ್ಲಿಕಾರ್ಜುನ ಕೊಡೊಳ್ಳಿ, ಎಂ. ಎಫ್. ಜಕಾತಿ, ಅಪ್ಪೇಶ ದಳವಾಯಿ, ನಾಗರತ್ನ ಪಾಟೀಲ, ಮಹಾದೇವಿ ಹುಯಿಲಗೋಳ, ರಘುನಾಥ ನಡುವಿನಮನಿ, ವಿಜಯಕುಮಾರ ಶಿಂಧೆ, ಸಿದ್ದಲಿಂಗಯ್ಯ ಒಕ್ಕುಂದಮಠ, ಮಡಿವಾಳಪ್ಪ ವರಗಣ್ಣವರ, ಫಕ್ಕೀರಪ್ಪ ಜಾಂಗಟಿ ಬಿ.ಜಿ.ಕುಂಬಾರ ಮಾತನಾಡಿದರು. ಕಿತ್ತೂರು ಸುತ್ತಲಿನ ಹಳ್ಳಿಗಳ ರೈತರು ಭಾಗವಹಿಸಿದ್ದರು.
ಉತ್ತರ ಕರ್ನಾಟಕದ ರೈತರನ್ನು ಉಪಯೋಗಿಸಿಕೊಂಡು ಬೆಂಗಳೂರಿನ ಮುಖಂಡರು ಸಾವಿರಾರು ಕೋಟಿ ದುಡ್ಡು ಮಾಡಿಕೊಂಡಿದ್ದಾರೆ. ಇನ್ನಾದರೂ ಈ ಭಾಗದ ರೈತರು ಬುದ್ಧಿವಂತರಾಗಬೇಕುಇಂಗಳಗುಪ್ಪೆ ಕೃಷ್ಣೇಗೌಡ ರೈತಪರ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.