ADVERTISEMENT

ಬೆಳಗಾವಿ | ರೈತರು ವಿಮಾ ಪರಿಹಾರ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 14:10 IST
Last Updated 4 ಡಿಸೆಂಬರ್ 2021, 14:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಬೆಳೆ ವಿಮೆ ಯೋಜನೆಯಲ್ಲಿ ನೋಂದಾಯಿಸಿದ ರೈತರು ವಿಮೆ ಪರಿಹಾರ ಪಡೆಯಲು ಅವಕಾಶವಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅರ್. ವೆಂಕಟೇಶಕುಮಾರ್ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಳೆ ಕಟಾವು /ಕೊಯ್ಲಿನ ನಂತರ ಜಮೀನಿನಲ್ಲೆ ಒಣಗಿಸಲು ಬಿಟ್ಟ ಸಂದರ್ಭಗಳಲ್ಲಿ ಅಥವಾ ಜಮೀನಿನಲ್ಲಿ ಕಟಾವು/ ಕೊಯ್ಲು ಮಾಡಿಟ್ಟ ವೇಳೆ ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಫಸಲು ಹಾಳಾದಲ್ಲಿ ಪರಿಹಾರ ಪಡೆಯಬಹುದು (ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿದವರು)’ ಎಂದು ಮಾಹಿತಿ ನೀಡಿದರು.

ADVERTISEMENT

‘ವಿಮಾ ಸಂಸ್ಥೆಯು ನಷ್ಟ ನಿರ್ಧರಿಸಿ ಇತ್ಯರ್ಥಪಡಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಲ್ಲಿ ಅವಕಾಶವಿದೆ. ಅಧಿಸೂಚಿತ ಬೆಳೆಗಳಲ್ಲಿ ಬೆಳೆ ನಷ್ಟ ಸಂಭವಿಸಿದರೆ, ವಿಮೆ ಮಾಡಿಸಿರುವ ರೈತರು ನೇರವಾಗಿ ಸಂಬಂಧಿಸಿದ ವಿಮಾ ಸಂಸ್ಥೆಗಳ ಕಚೇರಿಗಳಿಗೆ ಅಥವಾ ಹಣಕಾಸು ಸಂಸ್ಥೆ (ಬ್ಯಾಂಕ್) ಅಥವಾ ಕೃಷಿ/ತೋಟಗಾರಿಕೆ ಇಲಾಖೆ ಮೂಲಕ ತಕ್ಷಣ ಸೂಚನೆ ನೀಡಬೇಕು. ವಿಮೆ ಮಾಡಿಸಿದ ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಕಾರಣಗಳನ್ನು 72 ಗಂಟೆಗಳೊಳಗೆ ತಿಳಿಸಬೇಕು’ ಎಂದರು.

‘ಅರ್ಜಿಗಳನ್ನು ಪರಿಗಣಿಸಿ ಹಾನಿ ಸಂಭವಿಸಿದ ಬೆಳೆ ಕ್ಷೇತ್ರದ ಪ್ರತ್ಯೇಕ ಬೆಳೆ ನಷ್ಟ ಸಮೀಕ್ಷೆ ಅಥವಾ ಮಾರ್ಗಸೂಚಿ ಅನ್ವಯ ಬೆಳೆ ಹಾನಿ ಜಂಟಿ ಸಮೀಕ್ಷೆ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.