ADVERTISEMENT

ಆತ್ಮನಿರ್ಭರ ಪ್ಯಾಕೇಜ್‌ನ ಲಾಭ ಪಡೆಯಿರಿ

ಉದ್ಯಮಿಗಳಿಗೆ ಈರಣ್ಣ ಕಡಾಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 14:02 IST
Last Updated 18 ಫೆಬ್ರುವರಿ 2021, 14:02 IST
ಬೆಳಗಾವಿಯ ವಾಣಿಜ್ಯೋದ್ಯಮ ಸಂಸ್ಥೆಯಿಂದ ಗುರುವಾರ ನಡೆದ ಸಮಾರಂಭದಲ್ಲಿ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೆಳಗಾವಿಯ ವಾಣಿಜ್ಯೋದ್ಯಮ ಸಂಸ್ಥೆಯಿಂದ ಗುರುವಾರ ನಡೆದ ಸಮಾರಂಭದಲ್ಲಿ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೆಳಗಾವಿ: ‘ಕೇಂದ್ರ ಸರ್ಕಾರವು ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆತ್ಮನಿರ್ಭರ ಯೋಜನೆಯಲ್ಲಿ ₹ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆ. ಕಾಲಕಾಲಕ್ಕೆ ಸಭೆ ಆಯೋಜಿಸಿ, ಈ ಸೌಲಭ್ಯಗಳ ಗರಿಷ್ಠ ಲಾಭ ಪಡೆದುಕೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಲಹೆ ನೀಡಿದರು.

ನಗರದ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಉದ್ಯಮ ಕ್ಷೇತ್ರ ನಂಬಿಕೆ ಮೇಲೆ ನಿಂತಿದೆ. ಯುವ ಉದ್ಯಮಿಗಳು ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವ ಜೊತೆಗೆ, ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿ ಈ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಮಾರುಕಟ್ಟೆ ಸೃಷ್ಟಿಸಿಕೊಳ್ಳಿ

‘ಇದು ಪೈಪೋಟಿಯ ಯುಗ. ಶ್ರಮದ ಹೊರತಾಗಿ ಬೇರಾವ ಮಾರ್ಗದಿಂದಲೂ ಏನನ್ನೂ ಸಾಧಿಸಲಾಗದು. ಉದ್ಯಮ ಆರಂಭಿಸುವ ಮುನ್ನ ಸಾಧಕ-ಬಾಧಕಗಳ ಕುರಿತು ಅವಲೋಕಿಸಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಸಾಧಕರ ಜೀವನ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.

‘ನಾವು ಎಷ್ಟೇ ಗುಣಮಟ್ಟದ ವಸ್ತು ಉತ್ಪಾದಿಸಿದರೂ, ಮಾರುಕಟ್ಟೆ ಸೃಷ್ಟಿಸಿಕೊಳ್ಳದಿದ್ದರೆ ಯಶಸ್ಸು ಸಿಗುವುದಿಲ್ಲ. ಮಧ್ಯವರ್ತಿಗಳು ಲಾಭ ಗಿಟ್ಟಿಸಿಕೊಳ್ಳುತ್ತಾರೆ. ಹೀಗಾಗಿ, ಮಾರುಕಟ್ಟೆ ಸೃಷ್ಟಿಗೂ ಆದ್ಯತೆ ಕೊಡಬೇಕು. ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದವರು ಸಮಾಜಕ್ಕೂ ಕೊಡುಗೆ ನೀಡಬೇಕು. ಭವಿಷ್ಯ ರೂಪಿಸಿಕೊಳ್ಳುವ ಜೊತೆಗೆ, ಒಂದಷ್ಟು ಮಂದಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು’ ಎಂದು ಹೇಳಿದರು.

ಮಾಧವ ಆಚಾರ್ಯ (ದಿಲೀಪ್ ಧಾಮಲೆ ಸ್ಮಾರಕ ಟ್ರಸ್ಟ್), ದೀಪಕ ಠಕ್ಕರ್ (ಬಸಪ್ಪ ಕಗ್ಗಣಗಿ ಸ್ಮಾರಕ) ಹಾಗೂ ಮೇಘನ್ ನಾಯ್ಕ (ದಿ.ಮಧುಕರ ಹೆರವಾಡಕರ ಸ್ಮಾರಕ) ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಪಂಚಾಕ್ಷರಿ ಚೊನ್ನದ, ಗೌರವ ಕಾರ್ಯದರ್ಶಿ ಕಿರಣ ಅಗಡಿ, ಉಪಾಧ್ಯಕ್ಷರಾದ ಸಿ.ಸಿ. ಹೊಂಡದಕಟ್ಟಿ, ಹೇಮೇಂದ್ರ ಪೋರವಾಲ, ಸಂಜಯ ಪೋತದಾರ, ಪ್ರಭಾಕರ ನಾಗರಮುನ್ನೋಳಿ ಇದ್ದರು.

ಆಸ್ಪತ್ರೆ ಆರಂಭಿಸಲು ಮನವಿ

‘ಉದ್ಯಮಬಾಗ್ ಕೈಗಾರಿಕೆ ಪ್ರದೇಶದಲ್ಲೂ ಇಎಸ್‍ಐ ಆಸ್ಪತ್ರೆ ಆರಂಭಿಸಬೇಕು. ಇಎಸ್‍ಐ ನಿಗಮದ ಉಪ ಪ್ರಾದೇಶಿಕ ಕಚೇರಿ ತೆರೆಯಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ರಾಜ್ಯಸಭಾ ಸದಸ್ಯರಿಗೆ ಮನವಿ ಸಲ್ಲಿಸಿದರು.

‘ಸಹಾಯಧನ ಬಳಸಿಕೊಳ್ಳಿ’

ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ಮಾತನಾಡಿ, ‘ಜಿಲ್ಲೆಯಲ್ಲಿ 25ಸಾವಿರ ಉದ್ಯಮಿಗಳಿಗೆ ₹ 424 ಕೋಟಿ ಸಾಲ ನೀಡಲಾಗಿದೆ. ಈಗ ಹೊಸ ಕೈಗಾರಿಕೆ ನೀತಿ ಜಾರಿಗೆ ಬಂದಿದ್ದು, ಉದ್ಯಮಿಗಳ ಹೂಡಿಕೆಗೆ ಶೇ.25 ಸಹಾಯಧನ ನೀಡಲು ಯೋಜನೆ ರೂಪಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

***

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಕೃಷಿ ಕಾಯ್ದೆಗಳು ರೈತಪರವಾಗಿಯೇ ಇವೆ. ಆದರೆ, ಕೆಲವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರೈತರಿಗೆ ಮೋಸ ಮಾಡುತ್ತಿದ್ದಾರೆ

ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.