ಮೂಡಲಗಿ: ಶಾಂತಿ, ಸೌಹಾರ್ದತೆಗೆ ಹೆಸರಾಗಿರುವ ಮೂಡಲಗಿ ತಾಲ್ಲೂಕಿನ ಸುಣೋಧೋಳಿಯ ಪವಾಡ ಪುರುಷ ಜಡಿಸಿದ್ಧೇಶ್ವರ ಮಠದ ವೈಶಿಷ್ಟ್ಯಪೂರ್ಣವಾದ ರಥೋತ್ಸವವು ಏ.16ರಂದು ಸಂಜೆ 5ಕ್ಕೆ ಮಠಾಧೀಶ ಶಿವಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಪ್ರತಿ ವರ್ಷ ದವನದ ಹುಣ್ಣಿಮೆ ಮುಗಿದ ನಾಲ್ಕನೇ ದಿನಕ್ಕೆ ಜರುಗುವ ಜಾತ್ರೆಯ ರಥೋತ್ಸವವಕ್ಕೆ ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಸೇರಲಿದ್ದಾರೆ.
ಜಾತಿ, ಮತ, ಧರ್ಮ ಎಂದು ಭೇದ ಮಾಡದೆ ಎಲ್ಲ ಸಮಾಜದ ಜನರು ಮಠಕ್ಕೆ ಭಕ್ತರಿದ್ದು ಮಠವು ಭಾವೈಕ್ಯತೆಗೆ ಹೆಸರಾಗಿದೆ. ಪಟ್ಟಾಭೀಷಕವಾಗಿ 25 ವಸಂತಗಳನ್ನು ಪೂರೈಸಿರುವ ಶಿವಾನಂದ ಸ್ವಾಮೀಜಿಗಳು ಮಠದ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೊರಟಿದ್ದಾರೆ. ಮಠವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆಸುತ್ತಾ, ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದಾರೆ.
ಏ.14ರಂದು ಸಂಜೆ 6ಕ್ಕೆ ಹಣಮಂತ ದೇವರ ನಡೋಕಳಿ, ಸಂಜೆ 6ಕ್ಕೆ ಪ್ರವಚನ ನಡೆಯಲಿದೆ. ಪ್ರವಚನದಲ್ಲಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಶೇಗುಣಸಿಯ ಮಹಾಂತಪ್ರಭು ಸ್ವಾಮೀಜಿ, ಪಂಚನಾಯಕನಟ್ಟಿಯ ಕೇಶವಾನಂದ ಸ್ವಾಮೀಜಿ, ಲಕ್ಷ್ಮೇಶ್ವರದ ಗೀತಮ್ಮಾತಾಯಿ, ರಾಜಾಪುರದ ಶರಣ ಸಿದ್ದಪ್ಪ ಜೋಕ್ಕಾನಟ್ಟಿ ಭಾಗವಹಿಸುವರು. ಏ.15ರಂದು ಬೆಳಿಗ್ಗೆ 5ಕ್ಕೆ ಜಡಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಬಿಲ್ವಾರ್ಚನೆ, ಸಂಜೆ 4ಕ್ಕೆ ಹಣಮಂತ ದೇವರ ಕಡೆ ಓಕುಳಿ ಇರುವುದು. ಸಂಜೆ 5ಕ್ಕೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಇರವುದು. ಸಂಜೆ 6ಕ್ಕೆ ಪ್ರವಚನ ಇರುವುದು. ದುರದುಂಡೀಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುರಗೋಡದ ನೀಲಕಂಠ ಸ್ವಾಮೀಜಿ, ಗೋಕಾಕದ ಮುರುಘರಾಜೇಂದ್ರ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಅಂಕಲಗಿಯ ಅಮರಸಿದ್ಧೇಶ್ವರ ಸ್ವಾಮೀಜ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಭಾಗವಹಿಸುವರು.
ಏ.16 ಬೆಳಿಗ್ಗೆ 6ಕ್ಕೆ ಸನ್ನಿಧಿಗೆ ರುದ್ರಾಭಿಷೇಕ, ಬೆಳಿಗ್ಗೆ 10ಕ್ಕೆ ವಾದ್ಯಗಳೊಂದಿಗೆ ಗ್ರಾಮಾಂತರ ಕಳಸ ಮೆರವಣಿಗೆ, ಸಂಜೆ 5ಕ್ಕೆ ವಿವಿಧ ಗ್ರಾಮಗಳ ಪಲ್ಲಕ್ಕಿಗಳೊಂದಿಗೆ ರಥೋತ್ಸವ ಜರುಗಿದ ನಂತರ ಅನ್ನಸಂತರ್ಪಣೆ ಜರುಗುವುದು. ರಾತ್ರಿ 10ಕ್ಕೆ ಶ್ರೀಕೃಷ್ಣ ಪಾರಿಜಾತ ಬಯಲಾಟ ಇರುವುದು. ಏ. 21ರಂದು ಸಂಜೆ 4ಕ್ಕೆ ಜಂಗಿ ಕುಸ್ತಿಗಳು ಇರುವವು. ಏ.17ಕ್ಕೆ ಸಂಜೆ 4ಕ್ಕೆ ಜಂಗಿ ಕುಸ್ತಿಗಳು ಜರುಗುವವು. ಏ.20ರಂದು ರಾತ್ರಿ 9ಕ್ಕೆ ಕ್ಕೆ ಕಳಸ ಇಳಿಸುವರು.
ಜಾತ್ರೆಗೆ 14ನೇ ಶತಮಾನದ ಪೂರ್ವ ಇತಿಹಾಸವಿದೆ. ಸುಮಾರು 150 ವರ್ಷಗಳ ಪೂರ್ವದಲ್ಲಿ ಆಗಿರುವ ಘಟನೆಯಿಂದ ರಥಕ್ಕೆ ಹಗ್ಗವನ್ನು ಕಟ್ಟಿ ಎಳೆಯದೆ ಇಲ್ಲಿ ರಥೋತ್ಸವವು ಪ್ರತಿ ವರ್ಷವೂ ಜರುಗುತ್ತಾ ಬಂದಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.