
ಬೆಳಗಾವಿ: ಇಲ್ಲಿ ನಡೆದಿರುವ ಚಳಿಗಾಲದ ಅಧಿವೇಶನ ನೋಡಲು ಶಾಲಾಕಾಲೇಜು ವಿದ್ಯಾರ್ಥಿಗಳ ದಂಡೇ ದಾಂಗುಡಿ ಇಟ್ಟಿದೆ. ಆರು ದಿನಗಳಲ್ಲಿ 5,000ಕ್ಕೂ ಹೆಚ್ಚು ಮಕ್ಕಳು ಸದನ ಕಲಾಪಗಳನ್ನು ವೀಕ್ಷಿಸಿದ್ದಾರೆ.
ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳನ್ನು ವೀಕ್ಷಿಸಿ, ಅನುಭವ ಪಡೆಯಲು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪೂರ್ವದ್ವಾರದ ಮೂಲಕ ಬಂದು– ಹೋಗಲು ಅನುಕೂಲ ಕಲ್ಪಿಸಲಾಗಿದೆ. ಸದನದ ಒಳಗೆ ವೀಕ್ಷಣಾ ಗ್ಯಾಲರಿ ಇದ್ದು, ಕಾಯಂ ಆಸನಗಳ ವ್ಯವಸ್ಥೆ ಇದೆ. 200 ಮಕ್ಕಳು ಏಕಕಾಲಕ್ಕೆ, 15ರಿಂದ 20 ನಿಮಿಷ ಕುಳಿತು ವೀಕ್ಷಣೆ ಮಾಡಬಹುದು.
ಮೊದಲ ದಿನದಿಂದಗಲೇ ಮಕ್ಕಳು ಹಾಗೂ ಶಿಕ್ಷಕರು ತಂಡೋಪ ತಂಡವಾಗಿ ಬಂದು ಕಲಾಪಗಳನ್ನು ವೀಕ್ಷಿಸುತ್ತಿದ್ದಾರೆ. ಬೆಳಗಾವಿ ಮಾತ್ರವಲ್ಲ; ಅಕ್ಕಪಕ್ಕದ ಜಿಲ್ಲೆಗಳಿಂದಲೂ ಮಕ್ಕಳನ್ನು ಕರೆತರುತ್ತಿದ್ದಾರೆ. ಈ ಸುದ್ದಿ ಮಕ್ಕಳ ಬಾಯಿಯಿಂದ ಬಾಯಿಗೆ ಹರಡಿದ್ದು, ಪಾಸ್‌ಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದು, ಹೋಗಲು ಅಗತ್ಯ ಪೊಲೀಸ್ ಭದ್ರತೆ, ವಾಹನ ಪಾರ್ಕಿಂಗ್, ನೀರಿನ ವ್ಯವಸ್ಥೆ ಇದೆ.
ಮಂಗಳವಾರ ಒಂದೇ ದಿನ 700ಕ್ಕೂ ಹೆಚ್ಚು ಮಕ್ಕಳು ಬಂದರು. ಕಲಾಪ ನೋಡಿದ ಬಳಿಕ ಸೌಧ ಅಂದವನ್ನು ಸುತ್ತಾಡಿ ನೋಡಿದರು, ಸೌಧದ ಮುಂದಿನ ಕಾರಂಜಿ ಉದ್ಯಾನ, ಮಹಾತ್ಮರ ಪ್ರತಿಮೆಗಳು, ವಿಜ್ಞಾನ ಉದ್ಯಾನಗಳನ್ನು ಕಂಡು ಚಿತ್ರ ತೆಗೆಸಿಕೊಂಡರು. ವಿಶೇಷ ಚೇತನರಿಗಾಗಿ ಆಯಾ ಭಾಗದ ಶಾಸಕರು, ಸಚಿವರನ್ನು ಭೇಟಿಯಾಗಲು ಅವಕಾಶವಿದೆ. ಆಯ್ದ ಶಾಲೆಗಳ ಮಕ್ಕಳು ಸರ್ಕಾರಿ ಹಿರಿಯ ಅಧಿಕಾರಿಗಳನ್ನು ಭೇಟಿ ಕೂಡ ಮಾಡಿದರು.
ಮಕ್ಕಳ ಜತೆಗೇ ವಯಸ್ಕರೂ ದೊಡ್ಡ ಸಂಖ್ಯೆಯಲ್ಲಿ ಕಲಾಪ ವೀಕ್ಷಣೆ ಮಾಡಲು ಬರುತ್ತಿದ್ದಾರೆ. ಅವರವರ ಶಾಸಕರು ನೀಡುವ ಪಾಸ್‌ಗಳನ್ನು ಪಡೆದು ಬರುವವರ ಸಂಖ್ಯೆ ದೊಡ್ಡದಾಗಿದೆ. ಮಂಗಳವಾರ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸಭಾಂಗಣಗಳ ಆವರಣ ಜನಜಂಗುಳಿಯಿಂದ ತುಂಬಿ ಹೋಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.