ಸುವರ್ಣ ವಿಧಾನಸೌಧ: ಮುಂದುವರಿದ ಪ್ರತಿಭಟನೆ– ನಾನಾ ಸಂಘಟನೆಗಳಿಂದ ಹೋರಾಟ
ಬೆಳಗಾವಿ: ಚಳಿಗಾಲದ ಅಧಿವೇಶನದ ಒಂಭತ್ತನೇ ದಿನವಾದ ಗುರುವಾರವೂ ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಇರುವ ವೇದಿಕೆ ಪ್ರತಿಭಟನಕಾರರಿಂದ ತುಂಬಿತ್ತು. ವಿವಿಧ ಸಂಘಟನೆಗಳಿಂದ ಸಾಲು ಸಾಲಾಗಿ ಪ್ರತಿಭಟನೆ ನಡೆದವು.
ಕನಿಷ್ಠ ವೇತನ ಜಾರಿಗೊಳಿಸಿ
ವಿವಿಧ ಇಲಾಖೆಗಳ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದವರು ಪ್ರತಿಭಟಿಸಿದರು.
ಇಲಾಖೆಯಿಂದಲೇ ನಮಗೆ ನೇರವಾಗಿ ವೇತನ ಪಾವತಿಸಬೇಕು. ಸೇವಾಭದ್ರತೆ ಒದಗಿಸಬೇಕು. ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರದ ರಜೆ ನೀಡುವ ಜತೆಗೆ, ಕೆಲಸದ ಸಮಯ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಮರಡಿ ನಾಯಕ, ಕೆ.ಹನುಮೇಗೌಡ, ಪ್ರದೀಪ ದಳವಾಯಿ ನೇತೃತ್ವ ವಹಿಸಿದ್ದರು.
ಅಕ್ರಮ: ಎಂಜಿನಿಯರ್‌ಗಳ ಅಮಾನತು ಮಾಡಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2024-25 ನೇ ಸಾಲಿನಲ್ಲಿ ₹648 ಕೋಟಿ ಮುಂಚಿತವಾಗಿ ಪಡೆದು, ಆ ಹಣದಲ್ಲಿ ಕಳಪೆ ಕಾಮಗಾರಿ ಕೈಗೊಂಡ ಕೆಆರ್‌ಐಡಿಎಲ್ ಕಲಬುರಗಿ ವಲಯ ವ್ಯಾಪ್ತಿಯ ಎಂಜಿನಿಯರ್‌ಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಮಾರುತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಂಡಳಿಯಿಂದ ಕೆಆರ್‌ಐಡಿಎಲ್ ಕಲಬುರಗಿ ವಲಯಕ್ಕೆ 2021-22ನೇ ಸಾಲಿನಿಂದ 2024-25ನೇ ಸಾಲಿನವರೆಗೆ ವಹಿಸಿದ ಎಲ್ಲ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಿ, ಉನ್ನತಮಟ್ಟದ ಸಮಿತಿ ರಚಿಸಬೇಕು ಎಂದು ಆಗ್ರಹಿಸಲಾಯಿತು.
ಮಹಾರಾಷ್ಟ್ರ ಮಾದರಿಯಲ್ಲಿ ಅನುದಾನ ಕೊಡಿ
ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಗೋಶಾಲೆಗಳಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿ ಮುಪ್ಪಿನ ಕಾಡಸಿದ್ಧೇಶ್ವರ ಮಠ ಸೇವಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ರಾಜ್ಯದಲ್ಲಿ ಜಾನುವಾರುಗಳ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ ಸರ್ಕಾರ ಸಹಾಯಧನ ನೀಡಬೇಕು ಎಂದು ಕೋರಿದರು.
***
ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ
ಕಿತ್ತೂರು ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಲೋಕಸಭಾ ಕ್ಷೇತ್ರ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದರು.
ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣವನ್ನು ಹೋಬಳಿ ಕೇಂದ್ರವಾಗಿ ಘೋಷಿಸಿ ನಾಡಕಚೇರಿ ಸ್ಥಾಪಿಸಬೇಕು. ಎಂ.ಕೆ.ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲ್ದರ್ಜೆಗೆ ಏರಿಸಬೇಕು. ಉತ್ತರ ಕನ್ನಡ ಜಿಲ್ಲೆಯ ರಾಮನಗರವನ್ನು ಪ್ರತ್ಯೇಕ ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಬಸವರಾಜ, ಅಕ್ರಂ ಖಾನ್ ನೇತೃತ್ವ ವಹಿಸಿದ್ದರು.
**
₹100 ಕೋಟಿ ಅನುದಾನ ಮೀಸಲಿಡಿ
ಹೂಗಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘದವರು ಧರಣಿ ಮಾಡಿದರು.
ಹೂಗಾರ ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 2023ರಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಸ್ಥಾಪಿಸಿದೆ. ಆದರೆ, ಈವರೆಗೂ ಅದಕ್ಕೆ ಅನುದಾನ ಕೊಟ್ಟಿಲ್ಲ. ಹಾಗಾಗಿ ಅನುದಾನ ಮೀಸಲಿಡಬೇಕು. ಹೂಗಾರ ಸಮಾಜದ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.
ಬಸವರಾಜ ಹೂಗಾರ ನೇತೃತ್ವ ವಹಿಸಿದ್ದರು.
*
ಹಕ್ಕುಪತ್ರ ಕೊಡಿ
ಕಳೆದ 75 ವರ್ಷಗಳಿಂದ ಬಗರ್‌ಹುಕುಂ ಜಮೀನು ಸಾಗುವಳಿ ಮಾಡಿ ಜೀವನ ಸಾಗಿಸುತ್ತಿರುವವರಿಗೆ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಧಾರವಾಡ ಜಿಲ್ಲಾ ಘಟಕದವರು ಪ್ರತಿಭಟಿಸಿದರು.
ರಾಜ್ಯದಲ್ಲಿ ಶಿಥಿಲಾವಸ್ಥೆ ತಲುಪಿದ ಸರ್ಕಾರಿ ಶಾಲೆ ಕಟ್ಟಡಗಳನ್ನು ಮರುನಿರ್ಮಾಣ ಮಾಡಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆ ತ್ವರಿತವಾಗಿ ಭರ್ತಿ ಮಾಡಿ, ಸಕಾಲಕ್ಕೆ ರೈತರಿಗೆ ಸರ್ಕಾರಿ ಸೌಲಭ್ಯ ತಲುಪುವಂತಾಗಬೇಕು. ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಮುಖಂಡ ಹನುಮಂತಪ್ಪ ದೀವಿಗೀಹಳ್ಳಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.