ADVERTISEMENT

ಬೆಳಗಾವಿ: ಗಮನ ಸೆಳೆದ ತಾಳಮದ್ದಳೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 1:56 IST
Last Updated 15 ಡಿಸೆಂಬರ್ 2025, 1:56 IST
ಬೆಳಗಾವಿಯಲ್ಲಿ ಶನಿವಾರ ನಡೆದ ತಾಳಮದ್ದಳೆಯ ಸಮಾರಂಭದಲ್ಲಿ ಸಪ್ತಕದ ರೂವಾರಿ ಜಿ.ಎಸ್. ಹೆಗಡೆ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ತಾಳಮದ್ದಳೆಯ ಸಮಾರಂಭದಲ್ಲಿ ಸಪ್ತಕದ ರೂವಾರಿ ಜಿ.ಎಸ್. ಹೆಗಡೆ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು   

ಬೆಳಗಾವಿ: ಬೆಂಗಳೂರಿನ ಸಪ್ತಕ ಸಂಗೀತ ಸಂಸ್ಥೆಯಿಂದ ನಗರದ ಟಿಳಕವಾಡಿಯ ವರೇರಕರ ನಾಟ್ಯಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ತಾಳಮದ್ದಳೆ’ ಕಾರ್ಯಕ್ರಮ ನಗರದ ಜನರ ಮನ ಸೆಳೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಪ್ರೇಕ್ಷಕರು ಸಾಂಸ್ಕೃತಿಕ ರಸದೌತಣ ಅನುಭವಿಸಿದರು.

ಕವಿ ದೇವಿದಾಸ ವಿರಚಿತ ‘ಶ್ರೀಕೃಷ್ಣ ಸಂಧಾನ’ ಪ್ರಸಂಗದ ಕುರಿತು ನಡೆದ ಈ ತಾಳಮದ್ದಳೆಯಲ್ಲಿ ಜೋಗಿಮನೆಯ ಗೋಪಾಲಕೃಷ್ಣ ಭಾಗವತ ಅವರು ಭಾಗವತಿಕೆ ನಡೆಸಿಕೊಟ್ಟರು. ಅವರೊಂದಿಗೆ ಹರಿಕೇರಿಯ ಮಯೂರ ಹೆಗಡೆ ಅವರ ಮದ್ದಳೆ, ಕೌರವನಾಗಿ ಸಾಲೆಬೈಲು ನಾರಾಯಣ ಯಾಜಿ, ಶ್ರೀಕೃಷ್ಣನಾಗಿ ಕನಕನಹಳ್ಳಿಯ ಶಿವರಾಮ ಗಾಂವಕರ್‌ ಹಾಗೂ ವಿದುರನಾಗಿ ಕೆರೆಹೊಂಡದ ದಿವಾಕರ ಹೆಗಡೆ ಅವರ ಕಲಾಪ್ರದರ್ಶನ ಮನೋಜ್ಞವಾಗಿತ್ತು.

ಹಿರಿಯ ಸಾಹಿತಿ ಎಲ್‌.ಎಸ್.ಶಾಸ್ತ್ರಿ, ರಂಗಸಂಪದದ ಅರವಿಂದ ಕುಲಕರ್ಣಿ, ರಂಗ ಸೃಷ್ಟಿಯ ರಮೇಶ ಜಂಗಲ್, ಕಲಾರಂಗದ ರವಿ ಕೊಟಾರಗಸ್ತಿ, ಸಪ್ತಸ್ವರದ ನಿರ್ಮಲಾ ಪ್ರಕಾಶ ದೀಪ ಬೆಳಗಿಸಿದರು. ಸುಬ್ರಹ್ಮಣ್ಯ ಭಟ್ಟ, ಮುರುಗೇಶ ಶಿವಪೂಜಿ, ಶಿರೀಷ ಜೋಶಿ, ಪ್ರಭಾಕರ ಶಹಾಪುರಕರ, ಭಾರತಿ ಭಟ್, ಚಂದ್ರಶೇಖರ ನವಲಗುಂದ, ಆನಂದ ಪುರಾಣಿಕ, ಸತ್ಯನಾರಾಯಣ ವೇದಿಕೆ ಮೇಲಿದ್ದರು.

ADVERTISEMENT

ಸಪ್ತಕದ ರೂವಾರಿ ಜಿ.ಎಸ್. ಹೆಗಡೆ ಅವರಿಗೆ 75 ವರ್ಷ ತುಂಬಿದ್ದರಿಂದ ಬೆಳಗಾವಿ ಕಲಾವಿದರು ಹಾಗೂ ಸಾಹಿತಿಗಳ ಬಳಗದಿಂದ ‘ಅಮೃತ ಸನ್ಮಾನ’ ನೀಡಲಾಯಿತು.

ಸಂಸ್ಕಾರ ಭಾರತಿ, ರಂಗಸಂಪದ, ರಂಗಸೃಷ್ಟಿ, ಕಲಾರಂಗ, ಸಪ್ತಸ್ವರ, ವಾಗ್ದೇವಿ ಗಮಕ ಸಂಸ್ಥೆ, ನಾದಸುಧಾ ಸಂಸ್ಥೆ, ಸಂಗೀತ ಕಲಾಕಾರ ಸಂಘ ಕರ್ನಾಟಕ ಪತ್ರಕರ್ತರ ಸಂಘ, ನಿವೇದಾರ್ಪಣ ಅಕಾಡೆಮಿ, ಕೃಷ್ಣಮೂರ್ತಿ ಪುರಾಣಿಕ ಟ್ರಸ್ಟ್ ಮೊದಲಾದ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

800ಕ್ಕೂ ಹೆಚ್ಚು ಕಾರ್ಯಕ್ರಮ

ಸಪ್ತಕ ಸಂಗೀತ ಸಂಸ್ಥೆಯು 2006ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿದೆ. 20 ವರ್ಷಗಳಲ್ಲಿ ಸುಮಾರು 800ಕ್ಕೂ ಹೆಚ್ಚು ಸಂಗೀತ ಯಕ್ಷಗಾನ ತಾಳಮದ್ದಳೆ ಮೊದಲಾದ ಕಲಾ ಪ್ರದರ್ಶನಗಳನ್ನು ಮಾಡುತ್ತ ಬಂದಿದೆ. ಸುಮಾರು 4000ಕ್ಕೂ ಹೆಚ್ಚು ಕಿರಿ– ಹಿರಿಯ ಕಲಾವಿದರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇಂಥದ್ದೇ ಒಂದು ಪ್ರಯೋಗವನ್ನು ಬೆಳಗಾವಿಯಲ್ಲಿ ಮೊದಲ ಬಾರಿಗೆ ‍ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.