
– ಪ್ರಜಾವಾಣಿ ಚಿತ್ರ
ಚನ್ನಮ್ಮನ ಕಿತ್ತೂರು: ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ಸೇವೆ ನಡೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಬರುವ ತಿಂಗಳಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕು ಆಡಳಿತ ಸೌಧದ ಬಳಿ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇಬ್ಬರು ಸ್ತ್ರೀ ರೋಗ ತಜ್ಞರು, ಇಬ್ಬರು ಮಕ್ಕಳ ತಜ್ಞರು, ಇಬ್ಬರು ಅರವಳಿಕೆ ತಜ್ಞರು ಹಾಗೂ ಒಬ್ಬ ರೆಡಿಯಾಲಜಿಸ್ಟ್ ಇರುವಂತೆ ಏರ್ಪಾಟು ಮಾಡಲಾಗುತ್ತಿದೆ. ರಾತ್ರಿ ಹೊತ್ತಿನಲ್ಲಿ ಮಹಿಳಾ ರೋಗಿಗಳು ಬಂದರೂ ಚಿಕಿತ್ಸೆ ಸಿಗುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಜ.26 ರಂದು ಕೌನ್ಸಿಲಿಂಗ್ ನಡೆಯಲಿದೆ. ಅಗತ್ಯವಿರುವ ಕಡೆಗೆ ವೈದ್ಯರನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದರು.
ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಇಲ್ಲಿಂದ 7.5 ಕಿ.ಮೀ ಅಂತರದಲ್ಲಿ ಯೋಜನೆ ರೂಪಿಸಲಾಗಿತ್ತು. ಅಡಿಪಾಯ ಭರ್ತಿ ಮಾಡಲಾಗಿತ್ತು. ಅದನ್ನು ಪರಿಶೀಲಿಸಲು ಶಾಸಕ ಬಾಬಾಸಾಹೇಬ ಪಾಟೀಲ ನನ್ನನ್ನು ಕರೆದುಕೊಂಡು ಹೋಗಿದ್ದರು. ಇಷ್ಟು ದೂರದಲ್ಲಿ ಬೇಡ. ಮತ್ತೊಂದು ಇಟ್ಟಿಗೆಯನ್ನೂ ಇಲ್ಲಿಡುವುದು ಬೇಡ ಎಂದು ಕಾಮಗಾರಿ ನಿಲ್ಲಿಸಲು ಸೂಚಿಸಿದ್ದೆ ಎಂದು ಹಿಂದಿನ ಘಟನೆಯನ್ನು ಅವರು ನೆನಪಿಸಿಕೊಂಡರು.
ರಾಜ್ಯದ ಬೇರೆಲ್ಲೂ ಆಸ್ಪತ್ರೆ ನಿರ್ಮಾಣಕ್ಕೆ ಇಷ್ಟು ಅನುಕೂಲಕರವಾದ ಸ್ಥಳ ದೊರೆತಿಲ್ಲ. ಪಕ್ಕದಲ್ಲಿಯೇ ತಾಲ್ಲೂಕು ಕಚೇರಿ ಹಾಗೂ ಬಸ್ ನಿಲ್ದಾಣವಿದೆ. ಕಿತ್ತೂರಲ್ಲಿ ನಿರ್ಮಿಸಲಾಗುತ್ತಿರುವ ಈ ಆಸ್ಪತ್ರೆಗೆ ಒಳ್ಳೆಯ ಜಾಗೆ ಸಿಕ್ಕಿರುವುದು ಸಂತೋಷದ ವಿಷಯವಾಗಿದೆ ಎಂದು ಶ್ಲಾಘಿಸಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಈ ಆಸ್ಪತ್ರೆಯನ್ನು ಧಾರವಾಡ ಹದ್ದಿಯ ಸಮೀಪ ತೆಗೆದುಕೊಂಡು ಹೋಗಲಾಗಿತ್ತು. ಅದನ್ನು ವಿರೋಧಿಸಿ ಚಳವಳಿ ಮಾಡಲಾಯಿತು. ಅದು ₹15 ಕೋಟಿಯ 50 ಹಾಸಿಗೆಯ ಆಸ್ಪತ್ರೆಯಾಗಿತ್ತು. ಈಗ ಅದನ್ನು 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಕಾಮಗಾರಿಗೆ ವೆಚ್ಚವನ್ನು ₹33 ಕೋಟಿಗೆ ಏರಿಸಲಾಯಿತು ಎಂದರು.
ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧಿಕಾರಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಾಯವ್ಯ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಸುನಿಲ ಹನಮಣ್ಣವರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈಸಿದ್ದರಾಮ ಮಾರಿಹಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ರಾಣಿ ಶುಗರ್ ನಿರ್ದೇಶಕ ಶಂಕರ ಹೊಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕಿ ಪುಷ್ಟಲತಾ, ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಗಡಾದ,ತಾಲ್ಲೂಕು ವೈದ್ಯಾಧಿಕಾರಿ ಎಸ್. ಎಸ್. ಸಿದ್ದಣ್ಣವರ, ಡಾ. ಇಮಾದ್ ರಾಜಗೋಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.