ADVERTISEMENT

ಹಳ್ಳಿಗಳಿಗೆ ಹೋಗಿ ನಿಷ್ಠೆಯಿಂದ ಕೆಲಸ ಮಾಡಿ: ಶಿಕ್ಷಕರಿಗೆ ಸತೀಶ ಜಾರಕಿಹೊಳಿ ಕರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 10:55 IST
Last Updated 6 ಸೆಪ್ಟೆಂಬರ್ 2025, 10:55 IST
<div class="paragraphs"><p>ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕರೆ</p><p></p></div>

ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕರೆ

   

ಬೆಳಗಾವಿ: ‘ಸರ್ಕಾರಿ ಶಾಲೆಗಳ ಶಿಕ್ಷಕರು ನಗರ ವ್ಯಾಪ್ತಿಯ ಶಾಲೆಗಳನ್ನು ಮಾತ್ರ ಆಯ್ದುಕೊಳ್ಳದೆ, ಹಳ್ಳಿಗಳಿಗೆ ಹೋಗಿ ನಿಷ್ಠೆಯಿಂದ ಕೆಲಸ ಮಾಡಬೇಕು. ಆಗ ಸಮಾಜ ನಿಮ್ಮನ್ನು ಗುರುತಿಸುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟರು.

ADVERTISEMENT

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶಾಲಾ ಶಿಕ್ಷಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಬೆಳಗಾವಿ(ದಕ್ಷಿಣ) ಶೈಕ್ಷಣಿಕ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಕ್ಷಕರು ಹೆಸರಿಗಷ್ಟೇ ಕೆಲಸ ಮಾಡಿದರೆ ಸಾಲದು. ವೃತ್ತಿ ಬದುಕಿನಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ತಮ್ಮದೇಯಾದ ಛಾಪು ಮೂಡಿಸಬೇಕು. ಕರ್ತವ್ಯದ ಅವಧಿ ಮುಗಿಸಿ ಹೊರಬಂದ ನಂತರವೂ ಆ ಶಾಲೆಯಲ್ಲಿ ನಿಮ್ಮ ಹೆಸರು ಬೆಳಗುತ್ತಿರಬೇಕು. ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವ ಜತೆಗೆ, ಸಮಾಜ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು’ ಎಂದು ಕರೆಕೊಟ್ಟರು.

‘ಅರಣ್ಯದಿಂದ ಸುತ್ತುವರಿದ ಖಾನಾಪುರ ತಾಲ್ಲೂಕಿನ ಹಳ್ಳಿಗಳ ಸರ್ಕಾರಿ ಶಾಲೆಗಳ ಸೇವೆ ಸಲ್ಲಿಸಲು ಹೆಚ್ಚಿನ ಶಿಕ್ಷಕರು ಹಿಂದೇಟು ಹಾಕುತ್ತಾರೆ. ಆದರೆ, ಅಂಥ ಕಡೆಯಲ್ಲೇ ಕರ್ತವ್ಯ ನಿರ್ವಹಣೆಗೆ ಶಿಕ್ಷಕರು ಒಲವು ತೋರಬೇಕು. ಇದರಿಂದ ವೃತ್ತಿ ಬದುಕು ಸಾರ್ಥಕವಾಗುತ್ತದೆ. ಕಾಡಂಚಿನ ಗ್ರಾಮಗಳಲ್ಲಿ ಪರಿಶುದ್ಧ ವಾತಾವರಣ ಇರುವುದರಿಂದ ಆರೋಗ್ಯವೂ ಸುಧಾರಿಸಿ, ಹೆಚ್ಚು ವರ್ಷ ಬದುಕಬಹುದು’ ಎಂದರು.

‘ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮೂಲಸೌಕರ್ಯ ಮತ್ತು ಶಿಕ್ಷಕರ ಲಭ್ಯತೆ ವಿಚಾರದಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹಿಂದೆ ಇರಬಹುದು. ಆದರೆ, ಅವುಗಳನ್ನು ಹಗುರವಾಗಿ ಪರಿಗಣಿಸಬಾರದು. ಇಲ್ಲಿ ಕಲಿತವರು ವಿವಿಧ ರಂಗಗಳಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ’ ಎಂದು ಹೇಳಿದರು.

‘ಮಕ್ಕಳ ಕೊರತೆ ನೆಪವೊಡ್ಡಿ ಯಾವ ಸರ್ಕಾರಿ ಮುಚ್ಚಬಾರದು. ಒಂದೇ ಮಗುವಿದ್ದರೂ ಶಿಕ್ಷಕರನ್ನು ಒದಗಿಸಿ ಅಕ್ಷರ ಕಲಿಸಬೇಕು. ಆಗ ಸರ್ಕಾರಿ ಶಾಲೆಗಳು ಉಳಿಯುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ಸರದಾರ್ಸ್‌ ಪ್ರೌಢಶಾಲೆ ದುಃಸ್ಥಿತಿಯಲ್ಲಿದೆ. ₹5 ಕೋಟಿ ವೆಚ್ಚದಲ್ಲಿ ಅದಕ್ಕೆ ಪುನಶ್ಚೇತನ ನೀಡಲಾಗುವುದು. ಯಮಕನಮರಡಿ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಮಕ್ಕಳನ್ನು ಆಕರ್ಷಿಸಲು ಪ್ರಯತ್ನಿಸಲಾಗುತ್ತಿದೆ’ ಎಂದರು.

‘ಓದಿನತ್ತ ಯುವಜನರನ್ನು ಸೆಳೆಯುವ ಸಲುವಾಗಿ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ, ಗೋಕಾಕ ಮತ್ತು ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.

ಶಾಸಕ ಆಸಿಫ್‌ ಸೇಠ್‌ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಜಶೇಖರ ರಗಟಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಭಾಜನರಾದ 52 ಶಿಕ್ಷಕರು, ಸೇವಾನಿವೃತ್ತ 60 ಶಿಕ್ಷಕರು ಮತ್ತು ಇಬ್ಬರು ಸ್ಕೌಟ್ಸ್‌ ಮತ್ತು ಗೈಡ್ಸ್‌ ಶಿಕ್ಷಕರನ್ನು ಸತ್ಕರಿಸಲಾಯಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಯವ್ವಗೋಳ, ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಕುಮಾರ ಹೆಬಳಿ, ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.