ಸವದತ್ತಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಯಲ್ಲಮ್ಮ ದೇವಸ್ಥಾನದಲ್ಲಿ ಗುರುವಾರ ದರ್ಶನಕ್ಕಾಗಿ ಸರದಿಯಲ್ಲಿ ನಿಂತ ಹುಬ್ಬಳ್ಳಿ ಮೂಲದ ದಂಪತಿ ಮತ್ತು ಕಾನ್‌ಸ್ಟೆಬಲ್ ಮಧ್ಯೆ ನಡೆದ ವಾಗ್ವಾದ ತಾರಕಕ್ಕೇರಿ ವ್ಯಕ್ತಿಯೊಬ್ಬನನ್ನು ಕಾನ್‌ಸ್ಟೆಬಲ್ ಥಳಿಸಿದ ಘಟನೆ ನಡೆದಿದೆ. ಈ ಬಗ್ಗೆ ಪರಸ್ಪರರ ವಿರುದ್ಧ ಎರಡು ದೂರುಗಳು ದಾಖಲಾಗಿವೆ.
ಗಾಯಾಳುವಿನ ಪತ್ನಿ ಸುಷ್ಮಾ ದಿವಟಗಿ ಕಾನ್‌ಸ್ಟೆಬಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜುಲೈ 10ರಂದು ದೇವಿ ದರ್ಶನ ಪಡೆದು ಮರಳುವಾಗ ಮಗು ಅಳುತ್ತಿದ್ದರಿಂದ ಆಹಾರ ತಿನ್ನಿಸಲು ಸರದಿಯಲ್ಲಿ ಸುಷ್ಮಾ ಕುಳಿತಿದ್ದರು. ಆಗ ಗೃಹರಕ್ಷಕ ಸಿಬ್ಬಂದಿ ಕರೆಪ್ಪ ಸರ್ವಿ ಏರು ಧ್ವನಿಯಲ್ಲಿ ಹೊರನಡೆಯಲು ಆದೇಶಿಸಿದರು. ಈ ವೇಳೆ ಸುಷ್ಮಾ ಅವರ ಪತಿ ಅಣ್ಣಪ್ಪ (32) ಮತ್ತು ಸಿಬ್ಬಂದಿ ಕರೆಪ್ಪ ನಡುವೆ ವಾಗ್ವಾದ ನಡೆಯಿತು.
‘ಪತಿ ಜೊತೆ ಹೊರ ಬಂದು ಬಳಿಗಾರ ಅಂಗಡಿ ಹತ್ತಿರ ಕುಳಿತಾಗ ಸಿಬ್ಬಂದಿ ಕರೆಪ್ಪ ಕಾನ್‌ಸ್ಟೆಬಲ್ ಡಿ.ಡಿ. ನಾಗನಗೌಡ್ರ ಅವರನ್ನು ಕರೆಯಿಸಿದರು. ಆಗ, ಕಾನ್‌ಸ್ಟೆಬಲ್ ಪೂರ್ವಪರ ವಿಚಾರಿಸದೇ ತಮ್ಮ ಪತಿ ತಲೆಗೆ ಲಾಠಿಯಿಂದ ಥಳಿಸಿದ್ದಾರೆ. ಅವರು ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಸುಷ್ಮಾ ದಿವಟಗಿ ಅವರು ಕಾನ್‌ಸ್ಟೆಬಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶ್ರೀರಾಮ ಸೇನಾ ರಾಜ್ಯ ಘಟಕದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ‘ಯಲ್ಲಮ್ಮ ದೇವಸ್ಥಾನಕ್ಕೆ 7-8 ತಿಂಗಳ ಮಗುವೂ ಸೇರಿ ಕುಟುಂಬ ಸಮೇತ ಬಂದ ಧಾರವಾಡ ಜಿಲ್ಲೆಯ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ದಿವಟಗಿ ಅವರ ಮೇಲೆ ಅಲ್ಲಿನ ಹೋಮ್‌ಗಾರ್ಡ್ ಮತ್ತು ಪೊಲೀಸ್ ಸಿಬ್ಬಂದಿ ದಬ್ಬಾಳಿಕೆ ಮಾಡಿ ದರ್ಪ ತೋರಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸದಿದ್ದಲ್ಲಿ, ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಣ್ಣಪ್ಪ ದಿವಟಗಿ ಅವಾಚ್ಯ ಪದ ಬಳಸಿ, ಖಾಕಿ ಸಮವಸ್ತ್ರ ಹಿಡಿದು ಅವಮಾನಿಸಿದ್ದಾರೆ. ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ’ ಎಂದು ಸವದತ್ತಿ ಪೊಲೀಸ್ ಠಾಣೆಯ ಡಿ.ಡಿ. ನಾಗನಗೌಡ್ರ ಪ್ರತಿ ದೂರು ದಾಖಲಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ: 30 ವರ್ಷ ಶಿಕ್ಷೆ
ಬಾಲಕಿಯ ಅಪಹರಣ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿ ಮುತ್ತು ಬಸಪ್ಪ ಕುಂಬಾರಗೆ 30 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. 2023ರ ನ.20ರಂದು ಬಾಲಕಿ ಕಾಣೆಯಾದ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಅಂದಿನ ಪಿಎಸ್‌ಐ ಆನಂದ ಕ್ಯಾರಕಟ್ಟಿ 2024ರ ಜ.18 ರಂದು ಬಾಲಕಿಯನ್ನು ಪತ್ತೆ ಮಾಡಿ ಆಕೆಯ ಹೇಳಿಕೆ ಪಡೆದಿದ್ದರು. ನರಗುಂದ ತಾಲ್ಲೂಕಿನ ಕೊನ್ನೂರು ಗ್ರಾಮದ ಮುತ್ತು ಬಾಲಕಿಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ನಡೆಸಿದ್ದಲ್ಲದೇ ತನ್ನೊಂದಿಗೆ ಕರೆದೊಯ್ದಿದ್ದ. ವಿಚಾರಣೆ ನಡೆಸಿದ ನ್ಯಾಯಾದೀಶರಾದ ಸಿ.ಎಂ. ಪುಷ್ಪಲತಾ ಅವರು ತೀರ್ಪು ನೀಡಿದ್ದಾರೆ. ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ₹ 4 ಲಕ್ಷ ಪರಿಹಾರ ಧನ ಪಡೆಯುವಂತೆ ಆದೇಶಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಸರ್ಕಾರದ ಪರ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.