ಖಾನಾಪುರ: ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಗಡಿ ಹಂಚಿಕೊಂಡಿರುವ ತಾಲ್ಲೂಕಿನ ಸಡಾ ಗ್ರಾಮದ ಹೊರವಲಯದಲ್ಲಿ ಇರುವ ಐತಿಹಾಸಿಕ ಕೋಟೆ ಆಕರ್ಷಕವಾಗಿದೆ. ಇದು ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಕಟ್ಟಲಾಗಿದೆ ಎಂಬುದು ಇತಿಹಾಸಕಾರರ ಹೇಳಿಕೆ. ದಟ್ಟ ಹಸಿರಿನ ಮಧ್ಯೆ ಇರುವ ಕೋಟೆಯ ಅವಶೇಷಗಳು ಆಕರ್ಷಕವಾಗಿವೆ. ಪುನರುಜ್ಜೀವನಕ್ಕೆ ಕಾದಿವೆ.
ಕಣಕುಂಬಿ ಅರಣ್ಯದ ವ್ಯಾಪ್ತಿಯಲ್ಲಿ ಬೆಳಗಾವಿ– ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ಸಡಾ ಕ್ರಾಸ್‌ನಿಂದ 8 ಕಿ.ಮೀ ಒಳಗೆ ದಟ್ಟವಾದ ಕಾಡಿನಲ್ಲಿರುವ ಸಡಾ ಗ್ರಾಮದ ಹೊರವಲಯದಲ್ಲಿರುವ ಕೋಟೆ ಅವಸಾನದ ಅಂಚಿನಲ್ಲಿದೆ. ಕೋಟೆಯ ಪ್ರವೇಶದ್ವಾರ, ತಡೆಗೋಡೆಗಳು, ಕಮಾನುಗಳು ನಿರ್ವಹಣೆಯ ಕೊರತೆಯಿಂದ ಹಾಳಾಗಿವೆ. ಗೋಡೆಗಳು ಭಾಗಶಃ ಬಿದ್ದಿವೆ. ಸುತ್ತಮುತ್ತ ಮತ್ತು ಒಳಭಾಗದಲ್ಲಿ ಗಿಡಗಂಟಿಗಳು ಬೆಳೆದಿವೆ. ಕಾಯಕಲ್ಪಕ್ಕೆ ಕಾಯುತ್ತಿದೆ.
17ನೇ ಶತಮಾನದಲ್ಲಿ ಈ ಕೋಟೆಯನ್ನು ಶಿವಾಜಿ ಮಹಾರಾಜರ ಸೂಚನೆ ಮೇರೆಗೆ ಮರಾಠಾ ಪೇಶ್ವೆಗಳು ನಿರ್ಮಿಸಿದ್ದರು. ಕೋಟೆಗೆ ಸ್ವತಃ ಶಿವಾಜಿ ಮಹಾರಾಜರ ಪಾದಸ್ಪರ್ಶವಾಗಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಸಡಾ ಮಾದರಿಯಂತೆ ಬೆಳಗಾವಿ– ಖಾನಾಪುರ ಭಾಗದಲ್ಲಿ ಬೆಳಗಾವಿಯ ಕೋಟೆ, ಆನಂದಗಡ, ಭೀಮಗಡ, ರಾಜಹಂಸಗಡ ಕೋಟೆಗಳನ್ನು ಇದೇ ಅವಧಿಯಲ್ಲಿ ನಿರ್ಮಿಸಲಾಯಿತ್ತು ಎಂದು ಹೇಳಲಾಗುತ್ತದೆ.
‘ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕೋಟೆಗಳ ಸಂರಕ್ಷಣೆಗಾಗಿ ಪ್ರಾಧಿಕಾರ ರಚಿಸಿದೆ. ಪುಣೆ, ಸಾತಾರಾ, ಕೊಲ್ಹಾಪುರ, ರತ್ನಾಗಿರಿ ಜಿಲ್ಲೆಗಳಲ್ಲಿರುವ ಕೋಟೆಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಕೋಟೆಗಳ ಇತಿಹಾಸವನ್ನು ತಿಳಿಸುವ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ಶಿವಾಜಿ ಮಹಾರಾಜರ ಕಾಲದಲ್ಲಿ ತಾಲ್ಲೂಕಿನ ಸಡಾ, ನಂದಗಡ, ಮಾಚಿಗಡ, ಭೀಮಗಡಗಳಲ್ಲಿ ಮತ್ತು ಬೆಳಗಾವಿ ತಾಲ್ಲೂಕಿನ ರಾಜಹಂಸಗಡ ಗ್ರಾಮದ ಬಳಿ ಕೋಟೆಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳ ಸಂರಕ್ಷಣೆಗಾಗಿ ನಮ್ಮ ರಾಜ್ಯದಲ್ಲೂ ಮಹಾರಾಷ್ಟ್ರ ಮಾದರಿಯಲ್ಲಿ ಪ್ರಯತ್ನಗಳು ನಡೆಯಬೇಕು’ ಎಂದು ಪಾರವಾಡ ಗ್ರಾಮದ ನಿವಾಸಿ ದತ್ತಾರಾಮ ಗಾವಡೆ ಆಗ್ರಹಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.