ಬೆಳಗಾವಿ: ‘ನಾನು ಹುಟ್ಟಿದಾಗಿನಿಂದ ಮೈಸೂರು ದಸರಾ ನೋಡಿರಲಿಲ್ಲ. ಹೀಗಾಗಿ, ನಾನೂ ಸೇರಿ ನಾಲ್ವರು ಶಾಸಕರು ಮೈಸೂರು ಪ್ರವಾಸ ಮಾಡಿ ಬಂದಿದ್ದೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಶಾಸಕ ಭರಮಗೌಡ (ರಾಜು) ಕಾಗೆ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೈಸೂರು ಪ್ರವಾಸದ ವೇಳೆ ನಮ್ಮೊಂದಿಗೆ ಸಚಿವ ಸತೀಶ ಜಾರಕಿಹೊಳಿ ಅವರು ಇರಲಿಲ್ಲ’ ಎಂದರು.
‘ಸರ್ಕಾರ ನಮ್ಮನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಿದೆ. ಒಂದು ಮನೆ ಎಂದರೆ ಕೆಮ್ಮು– ನೆಗಡಿ ಇದ್ದೇ ಇರುತ್ತವೆ. ಅದನ್ನೆಲ್ಲ ನಾವು ಸರಿ ಪಡಿಸಿಕೊಳ್ಳುತ್ತೇವೆ. ಜಿಲ್ಲೆಯಲ್ಲಿ ನಾಯಕರ ಮಧ್ಯೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.
‘ಕಾಗವಾಡ ಕ್ಷೇತ್ರದ ಬಸವೇಶ್ವರ ಏತನೀರಾವರಿ ಯೋಜನೆಗೆ ಈಗಾಗಲೇ ₹1,200 ಕೋಟಿ ವೆಚ್ಚವಾಗಿದೆ. ಇನ್ನೂ ₹100 ಕೋಟಿ ನೀಡಿದರೆ ಯೋಜನೆ ಪೂರ್ಣಗೊಳ್ಳುತ್ತದೆ. 65 ಸಾವಿರ ಎಕರೆಗೆ ನೀರಾವರಿ ಸಿಗುತ್ತದೆ. ಹೀಗಾಗಿ, ಅನುದಾನಕ್ಕೆ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಿದ್ದೇನೆ. ಬೇರೆ ಭಿನ್ನಾಭಿಪ್ರಾಯ ಏನೂ ಇಲ್ಲ’ ಎಂದರು.
‘ರಮೇಶ ಜಾರಕಿಹೊಳಿ– ಜಗದೀಶ ಶೆಟ್ಟರ ಭೇಟಿ ಉದ್ದೇಶ ನನಗೆ ಗೊತ್ತಿಲ್ಲ. ನಾವಂತೂ ಬದುಕಿರುವವರೆಗೆ ಬಿಜೆಪಿಗೆ ಹೋಗುವುದಿಲ್ಲ. ಸತ್ತ ಮೇಲೆ ನಮ್ಮ ಹೆಣಗಳೂ ಹೋಗುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.