ADVERTISEMENT

ಬೆಳೆಯುತ್ತಿರುವ ನಗರ ಬೆಳಗಾವಿಯಲ್ಲಿ ‘ಡೆಬ್ರಿಸಾಸುರ’ನ ಹಾವಳಿಗಿಲ್ಲ ಕಡಿವಾಣ!

ವಿಲೇವಾರಿಗೆ ಕ್ರಮ ಕೈಗೊಳ್ಳದ ನಗರಪಾಲಿಕೆ; ಜಾಗವನ್ನೇ ಗುರುತಿಸಿಲ್ಲ

ಎಂ.ಮಹೇಶ
Published 23 ಸೆಪ್ಟೆಂಬರ್ 2019, 7:35 IST
Last Updated 23 ಸೆಪ್ಟೆಂಬರ್ 2019, 7:35 IST
ಬೆಳಗಾವಿಯ ಸಂಗಮೇಶ್ವರ ನಗರದ ಖಾಲಿ ಜಾಗದಲ್ಲಿ ಕಟ್ಟಡ ತ್ಯಾಜ್ಯವನ್ನು ಹಾಕಿರುವುದುಪ್ರಜಾವಾಣಿ ಚಿತ್ರ
ಬೆಳಗಾವಿಯ ಸಂಗಮೇಶ್ವರ ನಗರದ ಖಾಲಿ ಜಾಗದಲ್ಲಿ ಕಟ್ಟಡ ತ್ಯಾಜ್ಯವನ್ನು ಹಾಕಿರುವುದುಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರದಲ್ಲಿ ‘ಡೆಬ್ರಿಸ್’ (ಅನುಪಯುಕ್ತ ಕಟ್ಟಡ ತ್ಯಾಜ್ಯ) ನಿರ್ವಹಣೆಗೆ ನಗರಪಾಲಿಕೆಯಿಂದ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ.

ಇಲ್ಲಿ ಕಸದೊಂದಿಗೆ ಡೆಬ್ರಿಸ್ ಅನ್ನು ಎಲ್ಲೆಂದರಲ್ಲಿ ಸುರಿಯಲಾಗುತ್ತಿದೆ. ನಗರವನ್ನು ಪ್ರವೇಶಿಸುವ ಎಲ್ಲ ಪ್ರಮುಖ ರಸ್ತೆಗಳ ಬದಿಗಳಲ್ಲೂ ಈ ತ್ಯಾಜ್ಯದ ಗುಡ್ಡೆಗಳೇ ‘ಸ್ವಾಗತ’ ಕೋರುತ್ತಿವೆ.

ಘನ‌ತ್ಯಾಜ್ಯದೊಂದಿಗೆ ಡೆಬ್ರಿಸ್‌ ಅನ್ನೂ ರಸ್ತೆಬದಿಯಲ್ಲಿ, ಖಾಲಿ ನಿವೇಶನದಲ್ಲಿ, ಕೆರೆಗಳ ಪ್ರದೇಶದಲ್ಲಿ, ಗಟಾರ, ಮಳೆ ನೀರು ಚರಂಡಿ ಮೊದಲಾದವುಗಳಿಗೂ ಹಾಕಲಾಗುತ್ತಿರುವುದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.

ADVERTISEMENT

ನಗರದ ಅಲ್ಲಲ್ಲಿ ಹಾಗೂ ಹೊರವಲಯದಲ್ಲಿರುವ ಕೆರೆ, ಕಟ್ಟೆಗಳನ್ನು ‘ಮುಚ್ಚುವುದಕ್ಕೆ’ ಡೆಬ್ರಿಸ್ ಅನ್ನು ‘ಸುಲಭವಾದ ಅಸ್ತ್ರ’ದಂತೆ ಬಳಸಿಕೊಳ್ಳುತ್ತಿರುವುದನ್ನೂ ಗಮನಿಸಬಹುದಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಇಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ, ಡೆಬ್ರಿಸ್‌ ಮುಕ್ತ ನಗರವನ್ನಾಗಿಸಲು ಪರಿಣಾಮಕಾರಿಯಾದ ಯೋಜನೆಯನ್ನೇ ರೂಪಿಸಿಲ್ಲ!

ಡಂಪಿಂಗ್ ಯಾರ್ಡ್‌ನಂತಾಗಿವೆ:

ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಬದಿ, ಬಾಕ್ಸೈಟ್‌ ರಸ್ತೆ, ಬಾಚಿ–ರಾಯಚೂರು ರಸ್ತೆ, ಗೋವಾ, ಪಣಜಿಯಿಂದ ನಗರವನ್ನು ಪ್ರವೇಶಿಸುವ ರಸ್ತೆಬದಿಗಳು ಒಂದರ್ಥದಲ್ಲಿ ‘ಡೆಬ್ರಿಸ್ ಡಂಪಿಂಗ್ ಯಾರ್ಡ್‌’ಗಳಂತಾಗಿ ಹೋಗಿವೆ.

ಈ ಅನುಪಯುಕ್ತ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಗುಡ್ಡೆ ಹಾಕುತ್ತಿರುವುದರಿಂದ, ಸಹಜ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ. ಅನಧಿಕೃತವಾಗಿ ನಡೆಯುತ್ತಿರುವ ಈ ಕೃತ್ಯಗಳನ್ನು ತಡೆಯಲು ಮತ್ತು ರಾತ್ರೋರಾತ್ರಿ ನಿರ್ಮಾಣಗೊಳ್ಳುತ್ತಿರುವ ‘ಡೆಬ್ರಿಸ್‌ ಬೆಟ್ಟ ಅಥವಾ ಗುಡ್ಡ’ಗಳನ್ನು ಕರಗಿಸುವುದರತ್ತ ಸಂಬಂಧಿಸಿದ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಗಮನವನ್ನೇ ಕೊಟ್ಟಿಲ್ಲ.

ಬೆಳೆಯುತ್ತಿರುವ ನಗರವಾದ ಇಲ್ಲಿ, ನಿತ್ಯ ಹತ್ತಾರು ಕಡೆಗಳಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿವೆ. ಇದರೊಂದಿಗೆ ಡೆಬ್ರಿಸ್‌ ಉತ್ಪಾದನೆಯೂ ಹೆಚ್ಚಾಗುತ್ತಿದೆ. ಇಲ್ಲಿ ಎಷ್ಟು ಪ್ರಮಾಣದಲ್ಲಿ ಡೆಬ್ರಿಸ್‌ ಉತ್ಪಾದನೆಯಾಗುತ್ತಿದೆ ಎನ್ನುವ ಮಾಹಿತಿಯೂ ಪಾಲಿಕೆಯ ಬಳಿ ಇಲ್ಲ!

ನುಂಗುವವರಿಗೆ ಅನುಕೂಲ:

ಹಿಂದೊಮ್ಮೆ ಕೆರೆಯಂತಹ ಪ್ರದೇಶವಾಗಿದ್ದ ಸ್ಥಳಗಳು ಕಾಲಾನುಕ್ರಮೇಣ ಬಡಾವಣೆಗಳಾಗಿ ಬದಲಾಗಿವೆ. ಹೀಗೆ ಮಾಡುವವರು ಕಟ್ಟಡ ತ್ಯಾಜ್ಯವನ್ನು ಆಯುಧವನ್ನಾಗಿ ಬಳಸಿಕೊಂಡಿದ್ದಾರೆ. ಅನಧಿಕೃತ ಬಡಾವಣೆಗಳಲ್ಲಿ ಈ ರೀತಿಯ ಅಕ್ರಮಗಳು ಬಹಳವಾಗಿಯೇ ನಡೆದಿದೆ. ಸಂಬಂಧಿಸಿದ ಯಾವುದೇ ಪ್ರಾಧಿಕಾರದವರು ಇತ್ತ ತಲೆಕೆಡಿಸಿಕೊಂಡಿಲ್ಲ! ಇದರಿಂದಾಗಿ ‘ಡೆಬ್ರಿಸಾಸುರ’ ಎಲ್ಲಿ ಬೇಕೆಂದರಲ್ಲಿ ಹಾವಳಿ ಮಾಡುತ್ತಿದ್ದಾನೆ.

ಕಾಲೇಜು ರಸ್ತೆಯಲ್ಲಿರುವ ಸರ್ದಾರ್‌ ಶಾಲೆಯ ಮೈದಾನವನ್ನು ಈಚೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕ್ರಿಕೆಟ್‌ ಮೈದಾನವಾಗಿ ಅಭಿವೃದ್ಧಿಪಡಿಸಲಾಗಿದೆ. ಫ್ಲಡ್‌ಲೈಟ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಒಂದು ಬದಿಯಲ್ಲಿ ತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯವನ್ನು ತಂದು ಹಾಕುತ್ತಿರುವುದನ್ನು ತಡೆಯುವುದಕ್ಕೆ ವ್ಯವಸ್ಥೆಯೇ ಇಲ್ಲದಂತಾಗಿದೆ.

ಮೈದಾನಗಳಲ್ಲಿ, ಉದ್ಯಾನ, ಸ್ಮಶಾನಗಳಲ್ಲಿ, ಖಾಲಿ ನಿವೇಶನಗಳಲ್ಲಿ ಡೆಬ್ರಿಸ್ ತಂದು ಸುರಿಯುವವರಿಗೆ ಮೂಗುದಾರ ಹಾಕುವವರು ಇಲ್ಲವಾಗಿದ್ದಾರೆ. ಹೊರವಲಯದ ಬಳ್ಳಾರಿ ನಾಲೆಯ ಬದಿಯಲ್ಲೂ ಡೆಬ್ರಿಸ್ ಅನ್ನ ಚೆಲ್ಲಲಾಗುತ್ತಿದೆ. ಕ್ಲಬ್‌ ರಸ್ತೆಯಲ್ಲಿ ಸಿಪಿಇಡಿ ಮೈದಾನ ಸಮೀಪದ ರಸ್ತೆಬದಿಯಲ್ಲಿ ಡೆಬ್ರಿಸ್‌ ಒಂದು ರೀತಿಯ ‘ಕಾಂಪೌಡ್‌’ ರೀತಿಯಾಗಿ ಹೋಗಿದೆ!

ಪಾಲಿಕೆ ಕ್ರಮ ಕೈಗೊಂಡಿಲ್ಲ:

‘ಡೆಬ್ರಿಸ್‌ ಸಂಗ್ರಹಿಸಿ ಸುರಿಯುವುದಕ್ಕೆ ನಗರಪಾಲಿಕೆಯಿಂದ ನಿಗದಿತ ಜಾಗವನ್ನೇ ಗುರುತಿಸಿಲ್ಲ. ಹೀಗಾಗಿ, ಜನರು ರಸ್ತೆಬದಿ ಅಥವಾ ಸಿಕ್ಕಸಿಕ್ಕಲ್ಲಿ ಹಾಕುತ್ತಿದ್ದಾರೆ. ಸಮರ್ಪಕ ವ್ಯವಸ್ಥೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ’ ಎಂಬ ಮಾತುಗಳೂ ನಿರ್ಮಾಣಕಾರರಿಂದ ಕೇಳಿಬರುತ್ತಿವೆ.

ಕಟ್ಟಡ ನಿರ್ಮಿಸಲು ಪರವಾನಗಿ ಪಡೆಯುವಾಗ, ಡೆಬ್ರಿಸ್‌ ತೆರವುಗೊಳಿಸುವುದಕ್ಕೆಂದೇ ನಗರಪಾಲಿಕೆಯಿಂದ ಶುಲ್ಕ ಕಟ್ಟಿಸಿಕೊಳ್ಳಲಾಗಿರುತ್ತದೆ. ತೆರವುಗೊಳಿಸಬೇಕು ಎಂದು ಮಾಲೀಕರು, ಗುತ್ತಿಗೆದಾರರು ಅಥವಾ ನಿರ್ಮಾಣ ಮಾಡಿದವರಿಗೆ ಸೂಚಿಸಲಾಗಿರುತ್ತದೆ. ಆದರೂ ತೆರವು ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಪಾಲಿಕೆಯವರು ಮೇಲುಸ್ತುವಾರಿಯನ್ನೂ ವಹಿಸುತ್ತಿಲ್ಲ ಎನ್ನುವ ಮಾತುಗಳಿವೆ.

ಚರಂಡಿಗಳಿಗೂ ಧಕ್ಕೆ:

ಕಟ್ಟಡ ನಿರ್ಮಿಸುವವರು, ಹಳೆ ಮನೆಗಳನ್ನು ಕೆಡವಿ ಹೊಸದಾಗಿ ಕಟ್ಟುವವರು ಕಟ್ಟಡ ತ್ಯಾಜ್ಯವನ್ನು ರಾತ್ರಿವೇಳೆ ತಂದು ಹೊರವಲಯದ ರಸ್ತೆಗಳ ಬದಿಯಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಸುರಿಯುವುದು ಸಾಮಾನ್ಯವಾಗಿದೆ.

ಮಳೆ ಬಂದಾಗ ಈ ತ್ಯಾಜ್ಯವೆಲ್ಲವೂ ನಾಲೆ, ಮಳೆ ನೀರು ಚರಂಡಿಗೆ ಸೇರುವ ಸಾಧ್ಯತೆ ಬಹಳಷ್ಟಿದೆ. ಜೋರಾಗಿ ಮಳೆ ಬಂದಾಗ ಈ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಹೀಗಾಗಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವುದಕ್ಕೆ ತೊಂದರೆಯಾಗುತ್ತದೆ. ಮಳೆ ನೀರೆಲ್ಲವೂ ಚರಂಡಿಯಲ್ಲಿ ಹರಿಯಲಾಗದೇ ರಸ್ತೆಗೆ ಬರುತ್ತದೆ. ಈಚೆಗೆ ಧಾರಾಕಾರ ಮಳೆ ಸುರಿದ ಸಂದರ್ಭದಲ್ಲಿ ಇದರ ಅನುಭವವಾಗಿದೆ. ಆದರೆ, ಇದನ್ನು ತಡೆಯುವುದಕ್ಕೆ ಸ್ಥಳೀಯ ಸಂಸ್ಥೆಯವರು ಇನ್ನೂ ಕ್ರಮ ಕೈಗೊಂಡಿಲ್ಲದಿರುವುದು ಅಚ್ಚರಿ ಮೂಡಿಸುತ್ತದೆ.

‘ಕೆಲವೇ ದಿನಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ನಗರದಲ್ಲಿ ಕಟ್ಟಡಗಳನ್ನು ನಿರ್ಮಿಸಿದ ನಂತರ ಉತ್ಪಾದನೆಯಾಗುವ ತ್ಯಾಜ್ಯವನ್ನು (ಡೆಬ್ರಿಸ್) ಸಮರ್ಪಕ ವಿಲೇವಾರಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಚರ್ಚಿಸಿದ್ದೇನೆ. ಮೊದಲು, ಅದನ್ನು ಸುರಿಯಲು ನಿಗದಿತ ಜಾಗ ಗುರುತಿಸಬೇಕಾಗುತ್ತದೆ. ಈ ಕೆಲಸವನ್ನು ಶೀಘ್ರದಲ್ಲೇ ಮಾಡಿ ಜನರಿಗೂ ತಿಳಿಸಲಾಗುವುದು. ನಿಗದಿತ ಜಾಗವನ್ನು ತಿಳಿಸದಿದ್ದರೆ, ‘ಎಲ್ಲಿ ಸುರಿಯಬೇಕು’ ಎನ್ನುವ ಪ್ರಶ್ನೆ ಮೂಡುವುದು ಸಹಜ’ ಎಂದು ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.