ADVERTISEMENT

₹ 5.15 ಲಕ್ಷಕ್ಕೆ ಮಾರಾಟವಾದ ಜವಾರಿ ಹೋರಿ!

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 16:30 IST
Last Updated 11 ಡಿಸೆಂಬರ್ 2020, 16:30 IST
₹ 5.15 ಲಕ್ಷಕ್ಕೆ ಮಾರಾಟವಾದ ಹೋರಿ
₹ 5.15 ಲಕ್ಷಕ್ಕೆ ಮಾರಾಟವಾದ ಹೋರಿ    

ಹಂದಿಗುಂದ (ಬೆಳಗಾವಿ ಜಿಲ್ಲೆ): ರಾಯಬಾಗ ತಾಲ್ಲೂಕು ಹಾರೂಗೇರಿ ಸಮೀಪ ಕುರುಬಗೋಡಿಯ ರೈತ ಅಜ್ಜಪ್ಪ ಪದ್ಮಣ್ಣ ಕುರಿ ಅವರು ಸಾಕಿದ 16 ತಿಂಗಳ ಜವಾರಿ ಕಿಲಾರಿ ಹೋರಿಯು ದಾಖಲೆಯ ₹ 5.15 ಲಕ್ಷಕ್ಕೆ ಮಾರಾಟವಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಂಗಲವೇಡಾ ತಾಲ್ಲೂಕಿನ ನಂದೇಶ್ವರದ ಸೈನಿಕ ದತ್ತ ಜ್ಞಾನೋಬಾ ಕರಡೆ ಅವರು ಖರೀದಿಸಿದ್ದಾರೆ.

ರೈತನ ಕುಟುಂಬದವರು, ಮನೆ ಮುಂದೆ ಪೆಂಡಾಲ್ ಹಾಕಿಸಿ ಹೋರಿಗೆ ಸುಮಂಗಲಿಯರಿಂದ ಆರತಿ ಮಾಡಿಸಿ ಹೊರವಲಯದವರೆಗೂ ವಾದ್ಯ ಮೇಳದ ಮೆರವಣಿಗೆಯಲ್ಲಿ ಸಂಭ್ರಮದಿಂದ ಕಳುಹಿಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ಗ್ರಾಮದವರು ಹಾಗೂ ನೆರೆಯ ಗ್ರಾಮಸ್ಥರು ಕೂಡ ಸಾಕ್ಷಿಯಾದರು.

ADVERTISEMENT

‘ಫೆಬ್ರುವರಿಯಲ್ಲಿ ಚಿಂಚಲಿ ಮಾಯಕ್ಕದೇವಿ ಜಾತ್ರೆಯಲ್ಲಿ ಹೋರಿಯನ್ನು ₹ 1.1 ಲಕ್ಷಕ್ಕೆ ಖರೀದಿಸಿದ್ದೆವು. ಅದಕ್ಕೆ ಆಗ 6 ತಿಂಗಳಾಗಿತ್ತು. ನಿತ್ಯ ಹಾಲು, ಬಾಳೆ ಹಣ್ಣು, ಗೋಧಿ, ಕಡಲೆ ಮೊದಲಾದ ಪೌಷ್ಟಿಕ ಆಹಾರ ಕೊಡುತ್ತಿದ್ದೆವು. ಚೆನ್ನಾಗಿ ಸಾಕಿದ್ದೆವು. 10 ತಿಂಗಳಲ್ಲಿ ಅದಕ್ಕೆ ಒಳ್ಳೆಯ ಬೆಲೆ ಸಿಕ್ಕಿದೆ. ನಮಗೆ ಅದನ್ನು ಮಾರುವ ಉದ್ದೇಶವಿರಲಿಲ್ಲ. ಆದರೆ, ಮಹಾರಾಷ್ಟ್ರದ ಸೈನಿಕ ಬಹಳ ಒತ್ತಾಯ ಮಾಡಿದ್ದರಿಂದ ಕೊಟ್ಟಿದ್ದೇವೆ. ನಮ್ಮಂತೆಯೇ ಅವರೂ ನೋಡಿಕೊಂಡರೆ ಸಾಕು’ ಎಂದು ರೈತ ಅಜ್ಜಪ್ಪ ಪ್ರತಿಕ್ರಿಯಿಸಿದರು.

‘ಜವಾರಿ ಕಿಲಾರಿ ಎತ್ತುಗಳು ಮತ್ತು ಹೋರಿಗಳನ್ನು ನಮ್ಮ ಕುಟುಂಬ ಹಿಂದಿನಿಂದಲೂ ಸಾಕುತ್ತಿದೆ. ಉತ್ತಮ ಹೋರಿಗಳು ನಮ್ಮ ಬಳಿ ಇವೆ. ಈಗ ಮತ್ತೊಂದು ಹೋರಿ ನಮಗೆ ಸಿಕ್ಕಿರುವುದು ನಮ್ಮ ಸೌಭಾಗ್ಯವಾಗಿದೆ’ ಎಂದು ದತ್ತ ಕರಡೆ ಹೇಳಿದರು.

ಸ್ಥಳೀಯರಾದ ರಾಜು ಒಡೆಯರ ಮೊರಬ, ಚಾಮರಾಜ ಒಡೆಯರ ಯಲ್ಪರಟ್ಟಿ, ಸಂಜುಕುಮಾರ ಬಾನೆ, ಶರನಾಥ ಕುರಿ, ರಾಜು ಕುರಿ, ಶಿವಗೌಡ ಧರ್ಮಟ್ಟಿ, ಜಿನ್ನಪ್ಪ ಬೆಳಗಲಿ, ಮಹಾದೇವ ಕರಡಿ, ಟಿ.ಆರ್. ಪಾಟೀಲ, ಜಿನ್ನಪ್ಪ ಅಸಂಗಿ, ಮಾರುತಿ ಹುಕ್ಕೇರಿ, ಕರೆಪ್ಪಾ ಕುರಿ, ಭೀರಪ್ಪ ಪೂಜೇರಿ, ಬಂಡು ನಾಗನೂರು, ಸಂಜು ಶಿಂಧೆ, ನವನಾತ ಲೋಕುಡೆ, ಅಪ್ಪಾಸಾಬ ಗಡಕರಿ, ಜಯಪಾಲ ಚುಮ್ಮುಡ, ಚಂದ್ರು ಬಗರೆ, ಭರಮು ಪೂಜೇರಿ, ರಾಜು ಒಡೆಯರ, ಮುತ್ತಪ್ಪ ಕುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.