ADVERTISEMENT

ಕಿತ್ತೂರು ತಾಲ್ಲೂಕಿನ ಗುಣಮಟ್ಟದ ಶಾಲೆಯಿದು...

ಪ್ರದೀಪ ಮೇಲಿನಮನಿ
Published 22 ನವೆಂಬರ್ 2019, 19:30 IST
Last Updated 22 ನವೆಂಬರ್ 2019, 19:30 IST
ಕಿತ್ತೂರಿನ ಗುರುವಾರ ಪೇಟೆಯ ಸರ್ಕಾರಿ ಹಿರಿಯ ಮಾದರಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ
ಕಿತ್ತೂರಿನ ಗುರುವಾರ ಪೇಟೆಯ ಸರ್ಕಾರಿ ಹಿರಿಯ ಮಾದರಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ   

ಚನ್ನಮ್ಮನ ಕಿತ್ತೂರು (ಬೆಳಗಾವಿ): ಗುಣಮಟ್ಟದ ಶಿಕ್ಷಣಕ್ಕೆ ತಾಲ್ಲೂಕಿನಲ್ಲಿಯೇ ಹೆಸರುವಾಸಿ. ಇಲ್ಲಿ ನಡೆಯುವ ನಲಿ-ಕಲಿ ವರ್ಗಗಳು ರಾಜ್ಯಕ್ಕೆ ಮಾದರಿ. ಹಿರಿಯ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಹೆಚ್ಚುವರಿ ಗಂಟೆಗಳ ಬೋಧನೆ.

– ಇವೆಲ್ಲವೂ ಕಿತ್ತೂರು ಗುರುವಾರ ಪೇಟೆಯ ಸರ್ಕಾರಿ ಹಿರಿಯ ಮಾದರಿ ಶಾಲೆಗೆ ಕೀರ್ತಿ ತಂದ ಕೊಟ್ಟ ವಿಶೇಷಗಳು. ‘ಪಾಠಕ್ಕೂ ಸೈ, ಆಟಕ್ಕೂ ಜೈ’ ಎನ್ನುವ ಇಲ್ಲಿನ ವಿದ್ಯಾರ್ಥಿಗಳು ಶಿಕ್ಷಕರ ಪ್ರೀತಿಗೆ ಪಾತ್ರರಾಗಿ ಗಮನಸೆಳೆದಿದ್ದಾರೆ.

ಕೂಲಿಕಾರರ ಮಕ್ಕಳೇ ಹೆಚ್ಚು ಓದುತ್ತಿರುವ ಈ ಶಾಲೆಯಲ್ಲಿ ನುರಿತ ಶಿಕ್ಷಕರ ಪಡೆ ಇದೆ. ಅವರಿಗೆಲ್ಲ ಕ್ಯಾಪ್ಟನ್ ಆಗಿ ಕೆಲಸ ಮಾಡುತಿದ್ದಾರೆ ಮುಖ್ಯಶಿಕ್ಷಕ ಎಂ. ಎಫ್. ಜಕಾತಿ.

ADVERTISEMENT

ಸ್ವಾತಂತ್ರ್ಯ ಪೂರ್ವದ ಶಾಲೆ: ‘ಪಟ್ಟಣದ ಸ್ವಾತಂತ್ರ್ಯ ಪೂರ್ವದ ಶಾಲೆಯೆಂಬ ಹೆಗ್ಗಳಿಗೆ ಹೊಂದಿರುವ ಈ ಶಾಲೆಗೆ ಭರ್ತಿ 162ವರ್ಷಗಳು ತುಂಬಿವೆ. 1ರಿಂದ 7ನೇ ತರಗತಿವರೆಗೆ ಒಟ್ಟು 347 ಬಾಲಕ-ಬಾಲಕಿಯರು ಓದುತ್ತಿದ್ದಾರೆ. 5,6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಪ್ರತಿ ಶನಿವಾರ ಶಾಲೆ ಮುಕ್ತಾಯದ ಅವಧಿ ಬೆಳಿಗ್ಗೆ 11.45 ಇದ್ದರೂ ಶಿಕ್ಷಕರು ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 1ರವರೆಗೂ ಆಟ, ಪಾಠಗಳಿಗೆ ಮಾರ್ಗದರ್ಶನ ನೀಡುತ್ತಾರೆ’ ಎಂದು ಮುಖ್ಯಶಿಕ್ಷಕ ಎಂ.ಎಫ್. ಜಕಾತಿ ತಿಳಿಸಿದರು.

‘ಇದರ ಪರಿಣಾಮವೇ, ಡಯಟ್ ಪ್ರಾಚಾರ್ಯ ಎಂ.ಎಂ. ಸಿಂಧೂರ ಅವರು ಇತ್ತೀಚೆಗೆ ನಡೆಸಿದ ಶಿಕ್ಷಣದ ಗುಣಮಟ್ಟ ಅಳೆಯುವ ಮೌಲ್ಯಮಾಪನದಲ್ಲಿ ತಾಲ್ಲೂಕಿನಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂಬ ಹೆಮ್ಮೆ ನಮಗಿದೆ’ ಎಂದರು.

ಆಟಕ್ಕೂ ಸೈ:‌‘ಪಠ್ಯದಂತೆ ಪಠ್ಯೇತರ ಚಟುವಟಿಕೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಸೈ ಎನ್ನಿಸಿಕೊಂಡಿದ್ದಾರೆ. ಪ್ರತಿಭಾ ಕಾರಂಜಿಯ ಅಭಿನಯ ಗೀತೆ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ, ಜನಪದ ನೃತ್ಯ, ದೇಶಭಕ್ತಿಗೀತೆ, ಧಾರ್ಮಿಕ ಪಠಣದಲ್ಲೂ ದ್ವಿತೀಯ ಸ್ಥಾನ ಗಳಿಸಿದ್ದಾರೆ. ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಆಡಿದ ಬಾಲಕರು ಶಾಲೆಯಲ್ಲಿದ್ದಾರೆ. ಇದೇ ಆಟದಲ್ಲಿ 5 ಬಾಲಕರು ರಾಜ್ಯವನ್ನು ಪ್ರತಿನಿಧಿಸಿದ್ದರು’ ಎಂದು ತಿಳಿಸಿದರು.

ಶಿಕ್ಷಕರೂ ಟಾಪ್: ಪಠ್ಯೇತರ ಚಟುವಟಿಕೆಗಳಿಗೆ ಸಿಬ್ಬಂದಿಗಾಗಿ ನಡೆಯುವ ಸ್ಪರ್ಧೆಗಳಲ್ಲಿ ಶಾಲೆ ಶಿಕ್ಷಕರು ಭಾಗವಹಿಸಿ ಪ್ರತಿಭೆ ಮೆರೆದಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ರುದ್ರಮ್ಮ ಶಿವಲಿಂಗನವರ, ಆಶುಭಾಷಣ ಸ್ಪರ್ಧೆಯಲ್ಲಿ ಮಂಜುಳಾ ಪಾಟೀಲ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.

‘ನಲಿ-ಕಲಿಗಾಗಿ ನಡೆಯುವ ಇಲ್ಲಿಯ ತರಗತಿಗಳು ರಾಜ್ಯಕ್ಕೆ ಮಾದರಿಯಾಗಿವೆ’ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಎಸ್. ಜಯಕುಮಾರ್ ಸರ್ಕಾರಕ್ಕೆ ವರದಿ ಕೊಟ್ಟಿದ್ದರು. ಇದನ್ನು ಮಾದರಿಯಾಗಿಟ್ಟುಕೊಂಡು ರಾಜ್ಯದ ವಿವಿಧೆಡೆ ವರ್ಗಗಳು ನಡೆಯುತ್ತಿವೆ’ ಎಂದು ಸಂತಸ ಹಂಚಿಕೊಂಡರು.

ಹಳೆಯ ವಿದ್ಯಾರ್ಥಿಗಳ ಕಾಳಜಿ: ‘ಮಕ್ಕಳ ಪ್ರತಿಭೆ ಬೆಳಗಲು ಶಿಕ್ಷಕರು ಶ್ರಮ ವಹಿಸಿದರೆ, ಇಲ್ಲಿ ಕಲಿತು ಹೋಗಿರುವ ವಿದ್ಯಾರ್ಥಿಗಳು ಕಟ್ಟಡದ ಅಂದ ಹೆಚ್ಚಿಸಲು ತಮ್ಮದೇ ಕಾಣಿಕೆ ಸಲ್ಲಿಸಿದ್ದಾರೆ. ‘ನಮ್ಮೂರ ಶಾಲೆ’ ಎಂಬ ಅಭಿಮಾನದಿಂದ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬಣ್ಣ ಹಚ್ಚುವ ವೆಚ್ಚ ನೋಡಿಕೊಂಡಿದ್ದಾರೆ. ರಾಷ್ಟ್ರನಾಯಕರು, ಸ್ವಾತಂತ್ರ್ಯಯೋಧರ ಚಿತ್ರಗಳು, ಮಕ್ಕಳಿಗೆ ಉಪಯುಕ್ತ ಮಾಹಿತಿಯನ್ನು ಶಾಲಾ ಕಟ್ಟಡದ ಗೋಡೆಗೆ ಬರೆಸಿ ಮಾದರಿಯಾಗಿದ್ದಾರೆ. ಶಾಲೆಗೆ ಬೇಕಾಗುವ ವಸ್ತುಗಳನ್ನು ಕೆಲವರು ಕೊಡುಗೆಯಾಗಿ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಲಿ-ಕಲಿ’ಯ ಮಹಾದೇವಿ ಪಾಟೀಲ, ಶೋಭಾ ಪಾಶ್ಚಾಪುರ, ಪ್ರತಿಭಾ ಕಾರಂಜಿಯ ಶಶಿಕಲಾ ಹುಲಮನಿ, ರಂಜಿನಿ ಹಂಚಿನಮನಿ, ಆಟೋಟಗಳಲ್ಲಿ ಸುರೇಶ ಶಿವಪ್ಪನವರ, ಅರ್ಜುನ್ ಕಾಗೆಪ್ಪಗೋಳ ಶಿಕ್ಷಕರ ಮಾರ್ಗದರ್ಶನ ಶ್ಲಾಘನೀಯ' ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.