ADVERTISEMENT

ಪ್ರಭಾಕರ ಕೋರೆಗೆ ಅಮೆರಿಕ ವಿವಿ ಗೌರವ ಡಾಕ್ಟರೇಟ್

ಥಾಮಸ್‌ ಜೆಫರ್‌ಸನ್‌ ವಿವಿಯಲ್ಲಿ ಭಾರತ ಅಧ್ಯಯನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 10:52 IST
Last Updated 30 ಏಪ್ರಿಲ್ 2022, 10:52 IST
ಪ್ರಭಾಕರ ಕೋರೆ
ಪ್ರಭಾಕರ ಕೋರೆ   

ಬೆಳಗಾವಿ: ಇಲ್ಲಿನ ಕೆಎಲ್‌ಇ ಸೊಸೈಟಿ ಕಾರ್ಯಾಧ್ಯಕ್ಷ, ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಾಧಿಪತಿ ಪ್ರಭಾಕರ ಕೋರೆ ಅವರು ಅಮೆರಿಕದ ಫಿಲಾಡೆಲ್ಫಿಯಾದ ಥಾಮಸ್ ಜೆಫರ್‌ಸನ್‌ ವಿಶ್ವವಿದ್ಯಾಲಯವು ‘ಡಾಕ್ಟರ್ ಆಫ್‌ ಸೈನ್ಸ್‌’ ಗೌರವ ಡಾಕ್ಟರೇಟ್‌ ಪದವಿಗೆ ಭಾಜನವಾಗಿದ್ದಾರೆ.

‘ಶಿಕ್ಷಣ ಕ್ಷೇತ್ರಕ್ಕೆ,‌ ಆರೋಗ್ಯ ಸೇವೆ ಬಲಪಡಿಸಿದ್ದಕ್ಕೆ ಹಾಗೂ ಸಂಶೋಧನಾ ರಂಗಕ್ಕೆ ಬೆನ್ನೆಲುಬಾಗಿ ನಿಂತಿರುವುದಕ್ಕೆ ಮತ್ತು ಈ ಕ್ಷೇತ್ರಗಳಲ್ಲಿನ ಸಾಧನೆಗೆ ಚಾಲನಾ ಶಕ್ತಿಯಾಗಿರುವುದಕ್ಕಾಗಿ ಅವರನ್ನು ಪರಿಗಣಿಸಲಾಗಿದೆ. ಆ ವಿಶ್ವವಿದ್ಯಾಲಯದಲ್ಲಿ ಮೇ 25ರಂದು ನಡೆಯುವ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ’ ಎಂದು ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಸಂಶೋಧನಾ ನಿರ್ದೇಶಕ ಡಾ.ಶಿವಪ್ರಸಾದ ಗೌಡರ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಪದವಿ ಸ್ವೀಕರಿಸುವುದಕ್ಕೆ ಕೋರೆ ಅವರು ಸಮ್ಮತಿಸಿದ್ದಾರೆ’ ಎಂದರು.

ADVERTISEMENT

ಹೆಮ್ಮೆಯ ವಿಷಯುವಾಗಿದೆ:‘ಕೋರೆಯವರು ಸಮಾಜದ ವಿವಿಧ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಈ ಪ್ರತಿಷ್ಠಿತ ಗೌರವ ದೊರೆತಿರುವುದು ಕೆಎಲ್‌ಇ ಸಂಸ್ಥೆಗೆ ತುಂಬಾ ಹೆಮ್ಮೆಯ ವಿಷಯವಾಗಿದೆ. ಜೆಫರ್‌ಸನ್‌ ವಿ.ವಿ.ಯು ಅಮೆರಿಕದಲ್ಲೇ ಅತ್ಯುನ್ನತ ವಿ.ವಿ.ಗಳಲ್ಲಿ ಒಂದಾಗಿದೆ’ ಎಂದು ಹೇಳಿದರು.

‘ಕೋರೆಯವರು ಕೆಎಲ್‌ಇ ಸಂಸ್ಥೆ ಹಾಗೂ ಅಕಾಡೆಮಿಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಳಗಾವಿಯಂತಹ 2ನೇ ಹಂತದ ನಗರದಲ್ಲಿ ವಿಶ್ವದರ್ಜೆಯ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದಾರೆ. ಇದನ್ನು ವಿ.ವಿಯು ಗುರುತಿಸಿದೆ’ ಎಂದರು.

‘ಆ ವಿಶ್ವವಿದ್ಯಾಲಯದಲ್ಲಿ ಆರಂಭಿಸಿರುವ ಭಾರತ ಅಧ್ಯಯನ ಕೇಂದ್ರದ ಉದ್ಘಾಟನೆಯೂ ಮೇ 25ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ಅಲ್ಲಿನ ಯುಎಸ್‌ಎನಲ್ಲಿರುವ ಭಾರತೀಯ ರಾಯಭಾರಿಗೆ ಆಮಂತ್ರಣ ನೀಡಲಾಗಿದೆ. ಆ ಕೇಂದ್ರವು ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ ಮತ್ತು ಥಾಮಸ್‌ ಜೆಫರ್‌ಸನ್‌ ವಿ.ವಿ. ನಡುವೆ ಶೈಕ್ಷಣಿಕ ಹಾಗೂ ಸಂಶೋಧನಾ ಸಹಯೋಗ ನೀಡಲಿದೆ. ವಿನಿಮಯ ಕಾರ್ಯಕ್ರಮಗಳೂ ನಡೆಯಲಿವೆ. ಅಲ್ಲಿ ಸ್ಥಾಪಿತವಾಗಿರುವ 4 ವಿದೇಶಿ ಕೇಂದ್ರಗಳಲ್ಲಿ ಇದೊಂದಾಗಿದೆ. ಇಟಲಿ, ಐರ್ಲೆಂಡ್ ಮತ್ತು ಇಸ್ರೇಲ್‌ ದೇಶಗಳ ಕೇಂದ್ರಗಳು ಈಗಾಗಲೇ ಇವೆ’ ಎಂದು ಮಾಹಿತಿ ನೀಡಿದರು.

ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ:‘ತಾಯಿ ಮತ್ತು ನವಜಾತ ಶಿಶು ಆರೋಗ್ಯ ಕ್ಷೇತ್ರದಲ್ಲಿ ವಿಶ್ವದರ್ಜೆಯ ಸಂಶೋಧನೆಗಳನ್ನು ಕೆಎಲ್‌ಇ ಹಾಗೂ ಥಾಮಸ್‌ ಜಫರ್‌ಸನ್‌ ವಿ.ವಿ. ಜಂಟಿಯಾಗಿ ನಿರ್ವಹಿಸುತ್ತಿವೆ. ಈ ಸಂಶೋಧನೆಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದು ಆರೋಗ್ಯ ನೀತಿ ಹಾಗೂ ಮಾರ್ಗಸೂಚಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ’ ಎಂದು ವಿವರಿಸಿದರು.

ಥಾಮಸ್ ಜಫರ್‌ಸನ್‌ ವಿ.ವಿ.ಯ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಡಾ.ರಿಚರ್ಡ್‌ ಡರ್ಮನ್‌, ಕೋರೆ ಅವರು ನಮ್ಮ ವಿ.ವಿ.ಯಿಂದ ಗೌರವ ಡಾಕ್ಟರೇಟ್‌ಗೆ ಪಾತ್ರವಾದ ಮೊದಲ ಭಾರತೀಯ’ ಎಂದು ತಿಳಿಸಿದರು.

ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವೊಜಿ ಹಾಗೂ ಕುಲಸಚಿವ ಡಾ.ವಿ.ಎ. ಕೋಠಿವಾಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.