ADVERTISEMENT

ಬೆನಕಟ್ಟಿ– ಮಬನೂರ ಸಂಚಾರಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 15:54 IST
Last Updated 19 ಸೆಪ್ಟೆಂಬರ್ 2022, 15:54 IST
ಬೆನಕಟ್ಟಿ– ಮಬನೂರ ಮಧ್ಯದ ಹಳ್ಳದ ಸೇತುವೆ ಮೇಲೆ ಲಾರಿ ಕೆಟ್ಟುನಿಂತ ಕಾರಣ ಸೋಮವಾರ ಸಂಚಾರ ದಟ್ಟಣೆ ಉಂಟಾಯಿತು
ಬೆನಕಟ್ಟಿ– ಮಬನೂರ ಮಧ್ಯದ ಹಳ್ಳದ ಸೇತುವೆ ಮೇಲೆ ಲಾರಿ ಕೆಟ್ಟುನಿಂತ ಕಾರಣ ಸೋಮವಾರ ಸಂಚಾರ ದಟ್ಟಣೆ ಉಂಟಾಯಿತು   

ಬೆನಕಟ್ಟಿ: ಇಲ್ಲಿನ ಬೆನಕಟ್ಟಿ– ಮಬನೂರ ಮಧ್ಯದ ಹಳ್ಳದ ಸೇತುವೆ ಅತ್ಯಂತ ಕಿರಿದಾಗಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಸೋಮವಾರ ನಸುಕಿನ 4ರ ಸುಮಾರಿಗೆ ಲೋಡ್‌ ಆಗಿದ್ದ ಲಾರಿಯೊಂದು ಸೇತುವೆ ಬಳಿ ಸಿಕ್ಕಿಕೊಂಡಿದ್ದರಿಂದ ನಾಲ್ಕು ತಾಸು ಸಂಚಾರ ಬಂದ್‌ ಆಯಿತು.

ಈ ಸೇತುವೆ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವುದರಿಂದ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸೋಮವಾರ ನೌಕರರು, ಶಾಲೆ ಕಾಲೇಜು ವಿದ್ಯಾರ್ಥಿಗಳು, ಪ್ರಯಾಣಿಕರು, ಹೊಲಗಳ ಕೆಲಸಕ್ಕೆ ಹೋಗುವವರು, ಪತ್ರಿಕೆ– ಹಾಲು ಸಾಗಿಸುವ ವಾಹನಗಳೂ ನಿಂತಲ್ಲೇ ನಿಲ್ಲಬೇಕಾಯಿತು.

ಹುಬ್ಬಳ್ಳಿಯಿಂದ ಗೋಕಾಕ ಕಡೆಗೆ ಹೊರಟಿರುವ ಸರಕು ತುಂಬಿಕೊಂಡು ಲಾರಿಯು ಟೈರ್‌ ಬೋಲ್ಟ್ ಕಟ್ಟಾಗಿದ್ದರಿಂದ ರಸ್ತೆ ಮಧ್ಯೆ ನಿಂತಿತು. ಒಂದು ಕಡೆ ಮಬನೂರ, ಇನ್ನೊಂದು ಕಡೆ ಮಲಪ್ರಭಾ ಎಡದಂಡೆ ಕಾಲುವೆ ಕಡೆ ವಾಹನಗಳು ಸಾಲುಗಟ್ಟಿ ನಿಂತವು. ಒಂದುಷ್ಟು ವಾಹನಗಳು ಮಬನೂರ, ಮದ್ಲೂರ, ಜಾಲಿಕಟ್ಟಿ ತಲ್ಲೂರ ಮಾರ್ಗವಾಗಿ ಮುನವಳ್ಳಿ ಹಾಗೂ ಯರಗಟ್ಟಿ ಕಡೆ ಹೋಗಬೇಕಾಯಿತು.

ADVERTISEMENT

ಸಂಚಾರಕ್ಕೆ ಇಷ್ಟು ಅಡಚಣೆ ಯಾದರೂ ಪೊಲೀಸರಾಗಲೀ, ಸಂಬಂಧಿ ಸಿದ ಇಲಾಖೆಯ ಅಧಿಕಾರಿಗಳಾಗಲೀ ಸ್ಥಳಕ್ಕೆ ಬರಲೇ ಇಲ್ಲ. ಇದರಿಂದ ಚಿಕ್ಕ ವಾಹನಗಳು ಕೂಡ ಸಂಚಾರ ದಟ್ಟಣೆಯಲ್ಲಿ ಸಿಕ್ಕಿಕೊಂಡು ಸಂಕಷ್ಟ ಅನುಭವಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.