ADVERTISEMENT

‘ನಿಲಯಾರ್ಥಿ’ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 13:37 IST
Last Updated 9 ಫೆಬ್ರುವರಿ 2020, 13:37 IST
ಕೆಎಎಸ್‌ ಅಧಿಕಾರಿಗಳಾಗಿ ಆಯ್ಕೆಯಾದ ಬೆಳಗಾವಿ ಜಿಲ್ಲೆಯವರನ್ನು ಜಿಲ್ಲಾ ಪಂಚಾಯಿತಿಯಿಂದ ಭಾನುವಾರ ಸತ್ಕರಿಸಲಾಯಿತು
ಕೆಎಎಸ್‌ ಅಧಿಕಾರಿಗಳಾಗಿ ಆಯ್ಕೆಯಾದ ಬೆಳಗಾವಿ ಜಿಲ್ಲೆಯವರನ್ನು ಜಿಲ್ಲಾ ಪಂಚಾಯಿತಿಯಿಂದ ಭಾನುವಾರ ಸತ್ಕರಿಸಲಾಯಿತು   

ಬೆಳಗಾವಿ: ‘ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಭಯ ಸಲ್ಲದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಹೇಳಿದರು.

ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಇಲ್ಲಿನ ಕುಮಾರಗಂಧರ್ವ ಕಲಾಮಂದಿರದಲ್ಲಿ ತಾಲ್ಲೂಕಿನ ವಸತಿನಿಲಯಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಭಾನುವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮಾಂತರ ಪ್ರದೇಶದ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಯಾರಿಗೂ ಕಡಿಮೆ ಇಲ್ಲ. ಅವರಲ್ಲೂ ಪ್ರತಿಭೆ ಇರುತ್ತದೆ. ನನ್ನಿಂದ ಎಲ್ಲವೂ ಸಾಧ್ಯ ಎನ್ನುವ ಧೈರ್ಯದಿಂದ ಮುನ್ನುಗ್ಗಬೇಕು. ಶಿಸ್ತು, ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು’ ಎಂದರು.

ADVERTISEMENT

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಮನಗೌಡ ಕನ್ನೊಳ್ಳಿ, ‘ವಿದ್ಯಾರ್ಥಿಗಳು ಸಾಧನೆಗೆ ಬೇಕಾದ ಮನೋಸಾಮರ್ಥ್ಯ ಹೊಂದಿರಬೇಕು. ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ವಿಷಯ ಕ್ರೋಢೀಕರಿಸಿ ಪ್ರಯತ್ನಿಸಬೇಕು’ ಎಂದು ತಿಳಿಸಿದರು.

2015ನೇ ಸಾಲಿನಲ್ಲಿ ಕೆ.ಎ.ಎಸ್. ಅಧಿಕಾರಿಗಳಾಗಿ ಆಯ್ಕೆಯಾದ ಜಿಲ್ಲೆಯ 10 ಮಂದಿಯನ್ನು ಸತ್ಕರಿಸಲಾಯಿತು.

ಮಾನಸಿಕ ಸಾಮರ್ಥ್ಯ, ಭಾರತದ ಸಂವಿಧಾನ, ಭಾರತದ ಇತಿಹಾಸ ಹಾಗೂ ಕಲೆ ಮತ್ತು ಸಂಸ್ಕೃತಿ, ಸಾಮಾನ್ಯ ವಿಜ್ಞಾನ ಮೊದಲಾದ ವಿಷಯಗಳ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಬಾಡಗಿ, ಸತೀಶ ಬೆನಕಟ್ಟಿ, ಶರಣಯ್ಯ ಭಂಡಾರಿಮಠ ಹಾಗೂ ಡಾ.ಮೋಹನ ಭಸ್ಥೆ ಉಪನ್ಯಾಸ ನೀಡಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗೋಪಾಲ ಲಮಾಣಿ, ತಾಲ್ಲೂಕು ಅಧಿಕಾರಿಗಳಾದ ಕೆ.ಡಿ. ಬಂಗಿ, ಬಸವರಾಜ ಕುರಿಹುಲಿ, ಮಹಾಂತೇಶ ಚಿವಟಗುಂಡಿ, ಎ.ಕೆ. ನದಾಫ ಇದ್ದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಉಮಾ ಸಾಲಿಗೌಡರ ಸ್ವಾಗತಿಸಿದರು. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸದಾಶಿವ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಕೆ. ಹಳಬಣ್ಣವರ ಹಾಗೂ ಶ್ರೀಕಾಂತ ಐ. ದೇವಲತ್ತಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.