ADVERTISEMENT

ಬಿಡಿಸಿಸಿ ಬ್ಯಾಂಕ್‌ನಿಂದ ಆಮ್ಲಜನಕ ಉತ್ಪಾದನೆಗೆ 2 ಘಟಕ ಸ್ಥಾಪನೆ: : ರಮೇಶ ಕತ್ತಿ

​ಪ್ರಜಾವಾಣಿ ವಾರ್ತೆ
Published 7 ಮೇ 2021, 12:04 IST
Last Updated 7 ಮೇ 2021, 12:04 IST
ರಮೇಶ ಕತ್ತಿ
ರಮೇಶ ಕತ್ತಿ   

ಬೆಳಗಾವಿ: ‘ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಬ್ಯಾಂಕ್‌ ವತಿಯಿಂದ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿ ನಿತ್ಯ ತಲಾ 350 ಜಂಬೋ ಸಿಲಿಂಡರ್‌ಗಳಷ್ಟು ಆಮ್ಲಜನಕ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಅಧ್ಯಕ್ಷ ರಮೇಶ ಕತ್ತಿ ತಿಳಿಸಿದರು.

‘ಅವಶ್ಯವಿದ್ದವರು ಸರ್ಕಾರ ನಿಗದಿಪಡಿಸಿದ ದರ ಪಾವತಿಸಿ ಮರುಪೂರಣ ಮಾಡಿಸಿಕೊಳ್ಳಬಹುದು. ಸ್ಥಾಪನೆ ಕುರಿತು ಕೆಲವು ಏಜೆನ್ಸಿಗಳೊಂದಿಗೆ ಚರ್ಚಿಸಿದ್ದೇವೆ. ಸೆಪ್ಟೆಂಬರ್ ಕೊನೆಯಲ್ಲಿ ಎರಡೂ ಘಟಕಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು. ಇದು ಶಾಶ್ವತವಾದ ಘಟಕವಾಗಲಿದೆ ಹಾಗೂ ಜಿಲ್ಲೆಗೆ ಆಸ್ತಿಯೂ ಆಗಲಿದೆ’ ಎಂದು ಹೇಳಿದರು.

‘ಇದಕ್ಕಾಗಿ ₹ 1.50 ಕೋಟಿವರೆಗೆ ವೆಚ್ಚವಾದರೂ ಮಾಡಲಾಗುವುದು. ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಬ್ಯಾಂಕ್‌ ಕೂಡ ಕೈಜೋಡಿಸುತ್ತಿದೆ’ ಎಂದರು.

ADVERTISEMENT

‘ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಬ್ಯಾಂಕ್‌ನಿಂದ ಈಗಾಗಲೇ ಹಣ ನೀಡಲಾಗಿದೆ. ಹೀಗಾಗಿ, ಇಂದಿನ ಅಗತ್ಯಕ್ಕೆ ತಕ್ಕಂತೆ ಹಾಗೂ ನಮ್ಮ ಜಿಲ್ಲೆಯಲ್ಲಿ ಇರುವ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ, ‍ಪ್ರಾದೇಶಿಕ ಆಯುಕ್ತರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ಎದ್ದು ಕಾಣುತ್ತಿದೆ. ಇದನ್ನು ನಿವಾರಿಸುವುದಕ್ಕೆ ನಮ್ಮ ಕೊಡುಗೆ ಇದಾಗಲಿದೆ. ಸಮಾಜದ ಜೊತೆಗಿದ್ದೇವೆ ಎನ್ನುವುದನ್ನು ಬ್ಯಾಂಕ್‌ ಮತ್ತೊಮ್ಮೆ ಈ ಮೂಲಕ ತೋರಿಸುತ್ತಿದೆ’ ಎಂದು ಮಾಹಿತಿ ನೀಡಿದರು.

‘ಲಾಕ್‍ಡೌನ್‍ನಿಂದ ಜನಜೀವನಕ್ಕೆ ತೊಂದರೆ ಆಗುತ್ತದೆ. ಹೀಗಾಗಿ, ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಜನರಿಗೆ ಅವಕಾಶ ನೀಡಿ ಬಳಿಕ ಲಾಕ್‍ಡೌನ್ ಜಾರಿಗೊಳಿಸಬೇಕು. ಕೋವಿಡ್ ನಿಯಂತ್ರಿಸುವುದಕ್ಕೆ ಲಾಕ್‌ಡೌನ್‌ ಅಗತ್ಯವಿದೆ. ಆದರೆ, ಜನರು ತಮ್ಮ ಊರುಗಳಿಗೆ ಅಥವಾ ಬಂಧುಗಳನ್ನು ಸೇರಿಕೊಳ್ಳುವುದಕ್ಕೆ ಅವಕಾಶ ಕೊಡಬೇಕು’ ಎಂದರು.

‘ಸರ್ಕಾರವನ್ನು ಟೀಕಿಸುವುದು ಸುಲಭ. ಟೀಕೆಗಳನ್ನು ಕೈಬಿಟ್ಟು ಜನರನ್ನು ಉಳಿಸಲು ಹಾಗೂ ಕೊರೊನಾ ಹರಡದಂತೆ ನಿಯಂತ್ರಿಸಲು ಎಲ್ಲರೂ ಕೈಜೋಡಿಸಬೇಕು. ಹೆಚ್ಚಿನ ಜನರು ಸೇರುವ ಯಾವುದೇ ಸಭೆ–ಸಮಾರಂಭಗಳಿಗೆ ಇನ್ನೂ ಎರಡು ವರ್ಷ ಅವಕಾಶ ಕೊಡಬಾರದು. ಮದುವೆ, ಜಾತ್ರೆ ಮೊದಲಾದವುಗಳಿಗೂ ನಿರ್ಬಂಧ ವಿಧಿಸುವುದು ಒಳಿತು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.