ADVERTISEMENT

ಬೆಳಗಾವಿ | ಅಪ್ರಾಪ್ತರ ಬೈಕ್‌ ಸಂಚಾರ: 9 ಪ್ರಕರಣ

ಬೈಕ್‌– ಸ್ಕೂಟರ್‌ಗಳನ್ನು ವಶಕ್ಕೆ ಪಡೆದ ಪೊಲೀಸರು, ಪಾಲಕರಿಗೂ ಎಚ್ಚರಿಕೆ ನೀಡಿದ ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 2:44 IST
Last Updated 9 ಆಗಸ್ಟ್ 2025, 2:44 IST
   

ಬೆಳಗಾವಿ: ಮಕ್ಕಳಿಗೆ ದ್ವಿಚಕ್ರ ವಾಹನ ಓಡಿಸಲು ಕೊಡುವ ಪಾಲಕರು ಹಾಗೂ 18 ವರ್ಷಕ್ಕಿಂತ ಮುಂಚೆ ಸವಾರಿ ಮಾಡುವ ಮಕ್ಕಳಿಗೆ ನಗರದ ಸಂಚಾರ ಪೊಲೀಸರು ಶುಕ್ರವಾರ ಬಿಸಿ ಮುಟ್ಟಿಸಿದರು. ಶಾಲೆ, ಕಾಲೇಜುಗಳಿಗೆ ಬೈಕ್– ಸ್ಕೂಟರ್‌ಗಳ ಮೇಲೆ ಬರುತ್ತಿದ್ದವರ ಮೇಲೆ ಒಂದೇ ದಿನ 9 ಪ್ರಕರಣ ದಾಖಲಿಸಿದರು.

ನಗರದ ಮರಾಠಾ ಮಂಡಳ ಕಾಲೇಜು, ಎಸ್ಎಸ್‌ಎಸ್‌ ಸಮಿತಿ ಕಾಲೇಜು, ವಿಜಯಾ ಪ್ಯಾರಾ ಮೆಡಿಕಲ್‌ ಕಾಲೇಜು, ಗುಡ್ ಷಫರ್ಡ್‌ ಹಾಗೂ ಪೋದ್ದಾರ್‌ ಪಾಲಟೆಕ್ನಿಕ್‌ ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿದ್ದು, ಬೈಕುಗಳನ್ನೂ ಜಪ್ತಿ ಮಾಡಲಾಗಿದೆ.

‘ಮೋಟಾರು ವಾಹನ ಕಾಯ್ದೆ ಕಲಂ 199(ಎ)’ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಇದರಲ್ಲಿ ವಾಹನ ಚಲಾಯಿಸುವ ಮಕ್ಕಳಷ್ಟೇ ಜವಾಬ್ದಾರಿ ಪಾಲಕರೂ ಆಗುತ್ತಾರೆ. ಹಾಗಾಗಿ, ಅವರ ಮೇಲೇ ಕ್ರಮ ವಹಿಸಲಾಗುವುದು. ವಾಹನಗಳನ್ನು ಜಪ್ತಿ ಮಾಡಲಾಗುವುದು. ಈ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಪೊಲೀಸ್‌ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ.

ADVERTISEMENT

‘ಮಕ್ಕಳಿಗೆ ದ್ವಿಚಕ್ರ ವಾಹನ ಚಲಾವಣೆಗೆ ಅವಕಾಶ ಕೊಡುವುದು, ವಾಹನಗಳನ್ನು ನೀಡುವುದು ಸಂಚಾರ ನಿಯಮಗಳ ಸ್ಪಷ್ಟ ಉಲ್ಲಂಘನೆ. ಇದಕ್ಕೆ ಪಾಲಕರೇ ಮುಖ್ಯ ಹೊಣೆಗಾರರಾಗುತ್ತದೆ. ಇದರಲ್ಲಿ ಮೂರು ವರ್ಷ ಜೈಲು ಶಿಕ್ಷೆ ಜತೆಗೆ ₹25 ಸಾವಿರದವರೆಗೆ ದಂಡ ಕೂಡ ಇದೆ. ಈ ಬಗ್ಗೆ ಕಳೆದ ಎರಡು ವಾರಗಳಿಂದ ಪಾಲಕರಿಗೆ ಅರಿವು ಮೂಡಿಸಲಾಗುತ್ತಿದೆ. ಮಾಧ್ಯಮಗಳ ಮೂಲಕ ಎಚ್ಚರಿಕೆ ಕೂಡ ನೀಡಲಾಗಿದೆ. ಆದರೂ ಪಾಲಕರು ಎಚ್ಚೆತ್ತುಕೊಳ್ಳದ ಕಾರಣ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.