ಖಾನಾಪುರ: ತಾಲ್ಲೂಕಿನಲ್ಲೂ ಅನೇಕ ಪ್ರವಾಸಿ ತಾಣಗಳಿವೆ. ವರ್ಷದ ಎಲ್ಲಾ ದಿನಗಳಲ್ಲಿಯೂ ಈ ತಾಣಗಳಿಗೆ ಅಸಂಖ್ಯಾತ ಪ್ರವಾಸಿಗರು ತೆರಳಿ ಪ್ರಕೃತಿಯ ವಿಸ್ಮಯವನ್ನು ಅನುಭವಿಸಲು ಹಾತೊರೆಯುತ್ತಾರೆ. ಆದರೆ, ಉತ್ತರ ಕನ್ನಡ ಜಿಲ್ಲೆ ಮಾದರಿಯಲ್ಲಿ ಇಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿಲ್ಲ ಎಂಬುದು ಪರಿಸರ ಪ್ರಿಯರ ತಕರಾರು.
ಪಕ್ಕದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಗೋವಾ ರಾಜ್ಯದ ಪಣಜಿ, ಮಹಾರಾಷ್ಟ್ರದ ಅಂಬೋಲಿ ಮಾದರಿಯಲ್ಲಿ ಪರಿಸರ ಪ್ರವಾಸೋದ್ಯಮ ಸಾಕಷ್ಟು ಬೆಳೆದಿದೆ. ಖಾನಾಪುರ ತಾಲ್ಲೂಕಿನಲ್ಲಿಯೂ ಇಂಥದ್ದೇ ಪ್ರವಾಸಿ ತಾಣಗಳು ಸಾಕಷ್ಟಿವೆ. ಆದರೆ, ಜಿಲ್ಲಾಡಳಿತ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದೆ.
ಹಂಡಿಭಡಂಗನಾಥ ಬೆಟ್ಟ, ಹಲಸಿ, ಅಸೋಗಾ, ನಂದಗಡ, ಕಕ್ಕೇರಿ, ಹಬ್ಬನಹಟ್ಟಿ, ಕಣಕುಂಬಿ, ಚಿಗುಳೆ, ಪಾರವಾಡ, ತಳೇವಾಡಿ, ಕೃಷ್ಣಾಪುರ, ಗವ್ವಾಳಿ, ಅಮಗಾಂವ, ಚಾಪೋಲಿ ಮತ್ತಿತರ ಕಡೆಗಳಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಇವುಗಳ ಪೈಕಿ ಕೆಲವು ತಾಣಗಳಿಗೆ ಸಾರ್ವಜನಿಕರ ಮುಕ್ತ ಪ್ರವೇಶವಿದೆ. ಕೆಲವೆಡೆ ಹೋಗಿ ಬರಲು ಅರಣ್ಯ ಇಲಾಖೆಯ ನಿರ್ಬಂಧವಿದೆ.
ತಾಲ್ಲೂಕಿನ ವಿಶೇಷತೆ ಏನು?: ಹಂಡಿಬಡಗನಾಥ ತಾಲ್ಲೂಕಿನ ನಾಗರಗಾಳಿ ಅರಣ್ಯದಲ್ಲಿರುವ ಪ್ರಮುಖ ಪ್ರವಾಸಿ ತಾಣ. ಈ ಮಠಕ್ಕೆ 400 ವರ್ಷಗಳ ಇತಿಹಾಸವಿದೆ. ತಪಸ್ಸುಗೈದ ಒಂಭತ್ತು ಸ್ವಾಮಿಗಳ ಗದ್ದುಗೆ ಹಾಗೂ ಅವರ ಪ್ರತಿಕೃತಿ ಇರುವ ನವನಾಥ ಗುಹೆ ಇದೆ. ಆಕಳ ಗವಿ ಹಂಡಿ ಭಡಂಗನಾಥದ ಪ್ರಮುಖ ಆಕರ್ಷಣೆ. ಕಿತ್ತೂರ ರಾಣಿ ಚನ್ನಮ್ಮ ಮಠದ ಹೆಬ್ಬಾಗಿಲನ್ನು ಕಟ್ಟಿಸಿಕೊಟ್ಟಿದ್ದಾಳೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಡಗು ತಾಣವೂ ಇದಾಗಿತ್ತು.
ಅಪಟ್ಟಣದಿಂದ 4 ಕಿ.ಮೀ ದೂರದ ಮಲಪ್ರಭಾ ನದಿದಂಡೆಯ ಸುಂದರ ಪ್ರವಾಸಿ ತಾಣ. ಪುರಾತನ ಕಾಲದ ರಾಮಲಿಂಗೇಶ್ವರ ದೇವಾಲಯವಿದೆ. ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಉತ್ತಮ ತಾಣ. ಅಸೋಗಾದ ಮಲಪ್ರಭಾ ನದಿತೀರ ಹಿಂದಿ ಚಿತ್ರರಂಗದ ಹೃಷಿಕೇಶ ಮುಖರ್ಜಿ ನಿರ್ದೇಶನದ, ಅಮಿತಾಭ್ ಬಚ್ಚನ್-ಜಯಾ ಭಾದುರಿ ಅಭಿನಯದ ಹಿಂದಿ ಚಿತ್ರ ‘ಅಭಿಮಾನ್’ ಸೇರಿದಂತೆ ಮರಾಠಿ, ಕನ್ನಡ ಮತ್ತು ಹಿಂದಿ ಭಾಷೆಯ ಅನೇಕ ಚಿತ್ರಗಳ ಚಿತ್ರೀಕರಣ ನಡೆದ ತಾಣವಾಗಿದೆ.
ತಾಲ್ಲೂಕಿನ ಪಶ್ಚಿಮ ದಿಕ್ಕಿನ ಕೊನೆಯ ಗ್ರಾಮ ಚಿಗುಳೆ. ಈ ಗ್ರಾಮ ಕಣಕುಂಬಿಯಿಂದ 5 ಕಿ.ಮೀ ದೂರದಲ್ಲಿದ್ದು, ಇದೂ ಸಹ ಪ್ರಮುಖ ನಿಸರ್ಗದ ರಮ್ಯ ತಾಣ. ಪಶ್ಚಿಮ ಘಟ್ಟಗಳ ಅತ್ಯಂತ ಎತ್ತರದ, ಸಮುದ್ರಮಟ್ಟದಿಂದ 900ಮೀ ಎತ್ತರದಲ್ಲಿರುವ ಈ ಗ್ರಾಮ ಪಶ್ಚಿಮ ಘಟ್ಟಗಳ ತುತ್ತ ತುದಿಯಲ್ಲಿದೆ. ಚಿಗುಳೆ ನಮ್ಮ ರಾಜ್ಯದ ಗಡಿಗ್ರಾಮವೂ ಹೌದು.
ಚೋರ್ಲಾ ಘಟ್ಟ ಪ್ರದೇಶ ಕರ್ನಾಟಕದಿಂದ ಗೋವಾ ರಾಜ್ಯದತ್ತ ಸಾಗುವ 20 ಕಿಮೀ ದೂರದ ಪ್ರದೇಶ. ಈ ರಸ್ತೆಯಲ್ಲಿ ಪಶ್ಚಿಮ ದಿಗಂತದತ್ತ ನೋಡಿದಾಗ ಗೋವಾ ನಾಡು ಕಾಣುತ್ತದೆ. ಇಲ್ಲಿ ಸಂಜೆಯ ಸೂರ್ಯಾಸ್ತದ ಸುಂದರ ದೃಶ್ಯ ಮನಮೋಹಕ. ಕೆಳಗೆ ಕಾಲಡಿಯಲ್ಲಿ ಸಾವಿರಾರು ಅಡಿ ಪ್ರಪಾತ ರುದ್ರ ರಮ್ಯವಾಗಿದೆ.
ಭೀಮಗಡ ಅಭಯಾರಣ್ಯದ ತಳೇವಾಡಿ ಗ್ರಾಮದ ಬಳಿ ಬೆಟ್ಟದ ಮೇಲೆ ಬೃಹತ್ ಗವಿ ಇದ್ದು, ಗವಿಯ ಒಳ ಹೊಕ್ಕಾಗ ಅದರ ವಿಶಾಲತೆ ಬೆರಗು ಗೊಳಿಸುತ್ತದೆ. ಒಂದೇ ಸಲ 400 ಜನ ಕುಳಿಕೊಳ್ಳುವಷ್ಟು ವಿಶಾಲವಾಗಿದೆ. ಗುಹೆಯಲ್ಲಿ ರಂಧ್ರ ಕೊರೆದು ವಾಸಿಸುವ ರಾಬಿನ್ ಬ್ಯಾಟ್ ಬಾವಲಿಗಳ ಸಂಸಾರವಿದೆ. ಈ ಬಾವಲಿಗಳು ಇಲ್ಲಿ ಬಿಟ್ಟರೆ ಕಾಂಬೋಡಿಯಾ ದೇಶದಲ್ಲಿ ಮಾತ್ರ ಕಾಣ ಸಿಗುತ್ತವೆ.
ಹಬ್ಬನಹಟ್ಟಿ ಗ್ರಾಮದ ಬಳಿ ಮಲಪ್ರಭಾ ನದಿ ತೀರದಲ್ಲಿ ಆಂಜನೇಯನ ದೇವಾಲಯವಿದೆ. ಇದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇಂಥ ಹಲವು ಕ್ಷೇತ್ರಗಳಿಗೆ ಸರಿಯಾದ ರಸ್ತೆ ಕೂಡ ಇಲ್ಲ. ಮೂಲ ಸೌಕರ್ಯಗಳಿಲ್ಲ. ಪ್ರವಾಸಿಗರಿಗೆ ಸುರಕ್ಷತೆ ಇಲ್ಲ. ಎಂಬುದು ಜನರ ದೂರು.
ಇವರೇನಂತಾರೆ..?
ಕಾಡಿನ ಒಳಗೆ ಇರುವ ಪ್ರವಾಸಿ ತಾಣಗಳಿಗೆ ಸಾರ್ವಜನಿಕರು ಭೇಟಿ ನೀಡಲು ಅವಕಾಶವಿಲ್ಲ. ಅರಣ್ಯ ಇಲಾಖೆಯವರು ಅವಕಾಶ ನೀಡಿದರೆ ಕಾಡಿನೊಳಗಿನ ತಾಣಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಗೊಳಿಸಬಹುದು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. –ವಿಠ್ಠಲ ಹಲಗೇಕರ ಶಾಸಕ* ಕಾಡಿನೊಳಗಡೆ ಇರುವ ಪಿಕ್ನಿಕ್ ತಾಣಗಳಿಗೆ ಪ್ರವಾಸಿಗರು ಕದ್ದುಮುಚ್ಚಿ ಹೋಗಿಬರುತ್ತಿದ್ದಾರೆ. ಸರ್ಕಾರದಿಂದ ಈ ತಾಣಗಳಿಗೆ ಹೋಗಿಬರಲು ಶುಲ್ಕ ನಿರ್ಧರಿಸಿ ಅವಕಾಶ ಕಲ್ಪಿಸಬೇಕು. ಸಂಗ್ರಹವಾಗುವ ಶುಲ್ಕದಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. ಹೀಗೆ ಮಾಡಿದರೆ ಇಲ್ಲಿಯ ಜನರಿಗೂ ಅನುಕೂಲ ಆಗುತ್ತದೆ. –ಕೃಷ್ಣಾ ಭರಣಕರ ಕಾಲಮನಿ ಗ್ರಾಮ
ಪ್ರಮುಖ ಜಲಪಾತಗಳು
ಕಣಕುಂಬಿ ಜಾಂಬೋಟಿ ಭೀಮಗಡ ಲೋಂಡಾ ಹಾಗೂ ನಾಗರಗಾಳಿ ಅರಣ್ಯ ಪ್ರದೇಶದ ವಿವಿಧೆಡೆ ಹತ್ತಾರು ಜಲಪಾತಗಳಿದ್ದು ಇವುಗಳ ಪೈಕಿ ಮಹದಾಯಿ ನದಿಯ ವಜ್ರಾ ಜಲಪಾತ ಮತ್ತು ಕಣಕುಂಬಿ ಬಳಿ ಲಾಕಡಿ ಜಲಪಾತ ಪಾರವಾಡ ಗ್ರಾಮದ ಬಳಿಯ ವಜ್ರಧಾರಾ ಜಲಪಾತ ಜಾಂಬೋಟಿ ಬಳಿಯ ಭಟವಾಡಾ ನಾಗರಗಾಳಿ ಅರಣ್ಯದ ವಜ್ರಪೋಹಾ ಜಲಪಾತಗಳು ವೈಶಿಷ್ಟತೆಯಿಂದ ಕೂಡಿವೆ. ಕಣಕುಂಬಿ ಉತ್ತರ ಕರ್ನಾಟಕದ ಜೀವನದಿ ಮಲಪ್ರಭೆಯ ಉಗಮ ಸ್ಥಾನವಾಗಿ. ದಟ್ಟ ಅರಣ್ಯದಿಂದ ಸುತ್ತುವರೆದ ಗ್ರಾಮ ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ಮಳೆಗಾಲದ ಸಮಯದಲ್ಲಿ ಕಣಕುಂಬಿಯ ಹವಾಗುಣ ಸೃಷ್ಟಿ ಸೌಂದರ್ಯ ಆಗಸದ ಮೋಡಗಳ ಚೆಲ್ಲಾಟ ಮತ್ತು ಮಳೆಯ ಆರ್ಭಟ ಮನಸ್ಸಿಗೆ ಮುದ ನೀಡುತ್ತದೆ.
ನಿರ್ಬಂಧದ್ದೇ ಸಮಸ್ಯೆ
ಹಂಡಿಭಡಂಗನಾಥ ಹಲಸಿ ಅಸೋಗಾ ನಂದಗಡ ಕಕ್ಕೇರಿ ಕಣಕುಂಬಿ ಧಾರ್ಮಿಕ ಪ್ರವಾಸಿ ತಾಣಗಳಾಗಿವೆ. ಚಿಗುಳೆ ಪಾರವಾಡ ತಳೇವಾಡಿ ಕೃಷ್ಣಾಪುರ ಗವ್ವಾಳಿ ಅಮಗಾಂವ ಚಾಪೋಲಿಗಳು ಪರಿಸರ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅರಣ್ಯ ಇಲಾಖೆಯ ಪೂರ್ವಾನುಮತಿ ಅಗತ್ಯ. ಈ ನಿರ್ಬಂಧ ತೆರವುಗೊಳಿಸಬೇಕು. ಕಾನನದೊಳಗಿನ ತಾಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು. ಕಾನನದೊಳಗಿನ ತಾಣಗಳಿಗೆ ಹೋಗಿಬರಲು ಶುಲ್ಕ ನಿಗದಿಪಡಿಸಬೇಕು ಎಂಬ ಕೂಗಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.