ADVERTISEMENT

ಪಿಎಂ ಮೋದಿ ಸಿಲಿಂಡರ್‌ ಕೊಡದಿದ್ದರೂ ಕೇಂದ್ರದ ಮಂತ್ರಿಗಳಿಗೆ ಊಟ ಹಾಕಿದ ಅಜ್ಜಿ!

ರೊಟ್ಟಿ, ಜುನುಕದ ವಡಿ, ಅನ್ನ, ಸಾರು ಸಿದ್ಧಪಡಿಸಿದ ಬಾಯವ್ವ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 22:06 IST
Last Updated 28 ಜೂನ್ 2022, 22:06 IST
ಬೆಳಗಾವಿ ತಾಲ್ಲೂಕಿನ ಹಿಂಡಲಗಾದ ಬಾಯವ್ವ ವಸಂತ ಮಾಸ್ತೆ ಅವರು ಮಂಗಳವಾರ ತಮ್ಮ ಮನೆಯಲ್ಲಿ (ಎಡದಿಂದ) ಸಚಿವರಾದ ಗೋವಿಂದ ಕಾರಜೋಳ, ಸೋಮ ಪ್ರಕಾಶ್‌ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರಿಗೆ ಊಟ ಬಡಿಸಿದರು
ಬೆಳಗಾವಿ ತಾಲ್ಲೂಕಿನ ಹಿಂಡಲಗಾದ ಬಾಯವ್ವ ವಸಂತ ಮಾಸ್ತೆ ಅವರು ಮಂಗಳವಾರ ತಮ್ಮ ಮನೆಯಲ್ಲಿ (ಎಡದಿಂದ) ಸಚಿವರಾದ ಗೋವಿಂದ ಕಾರಜೋಳ, ಸೋಮ ಪ್ರಕಾಶ್‌ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರಿಗೆ ಊಟ ಬಡಿಸಿದರು   

ಬೆಳಗಾವಿ: ‘ನನಗೆ ಮೋದಿ ಇನ್ನೂ ಅಡಗಿ ಗ್ಯಾಸ್‌ ಕೊಟ್ಟಿಲ್ಲೆಪ್ಪ. ಇವತ್ತು ಮನೆಗೆ ಮಂತ್ರಿ ಬರಾತಾನ್‌ ಅಂದ್ರು. ಕಟಗಿ ಒಲಿ ಮ್ಯಾಲೆ ಅಡಗಿ ಮಾಡಿನೀಡೇನಿ...’

ತಾಲ್ಲೂಕಿನ ಹಿಂಡಲಗಾ ಗ್ರಾಮದ ಅಜ್ಜಿ ಬಾಯವ್ವ ವಸಂತ ಮಾಸ್ತೆ ಅವರ ಮಾತುಗಳಿವು.ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ರಾಜ್ಯ ಖಾತೆ ಸಚಿವ ಸೋಮ ಪ್ರಕಾಶ್ ಅವರು ಮಂಗಳವಾರ ಮಧ್ಯಾಹ್ನ, ಪರಿಶಿಷ್ಟ ಜಾತಿಯ ಈ ಅಜ್ಜಿ ಮನೆಯಲ್ಲೇ ಊಟ ಮಾಡಿದರು.

87 ವರ್ಷ ವಯಸ್ಸಿನ ಈ ಹಿರಿಯ ಜೀವಕ್ಕೆ ಇನ್ನೂ ಅಡುಗೆ ಅನಿಲ ಸಿಲಿಂಡರ್‌ ನೀಡಿಲ್ಲ. ಒಲೆಯ ಮೇಲೆಯೆ ರೊಟ್ಟಿ, ಜುನುಕದ ವಡಿ, ಬದನೆಕಾಯಿ ಪಲ್ಯ, ಅನ್ನ, ಸಾರು, ಶೇಂಗಾ ಚಟ್ನಿಯನ್ನೂ ಅವರು ಸಿದ್ಧಪಡಿಸಿದ್ದರು. ಸಚಿವರಿಗೆ ತಾವೇ ಉಣಬಡಿಸಿದರು.

ADVERTISEMENT

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಸಂವಾದಕ್ಕೆ ಜಿಲ್ಲೆಗೆ ಬಂದಿದ್ದ ಸಚಿವ ಸೋಮ ಪ್ರಕಾಶ್‌, ಪೂರ್ವನಿಯೋಜನೆಯಂತೆ ಪರಿಶಿಷ್ಟರ ಮನೆಯಲ್ಲಿ ಊಟ ಮಾಡಿದರು. ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಲಾ ಸುರೇಶ ಅಂಗಡಿ ಕೂಡ ಊಟ ಸವಿದರು.

‘ಮೋದಿ ಬಡವರಿಗೆ ಉಚಿತವಾಗಿ ಗ್ಯಾಸ್ ಕೊಡ್ತಾನೆ ಎಂದಿದ್ದರು. ನಾನು ಸಾಕಷ್ಟು ಅರ್ಜಿ ಕೊಟ್ಟರೂ ನನಗೆ ಗ್ಯಾಸ್‌ ಬಂದಿಲ್ಲ. ಇಬ್ಬರು ಗಂಡುಮಕ್ಕಳಿದ್ದು, ಇಬ್ಬರೂ ಬೇರೆ ಬೇರೆಮನೆಯಲ್ಲಿದ್ದಾರೆ. ನಾನೊಬ್ಬಳೇ ಇಲ್ಲಿ ಇದ್ದೇನೆ. ಮಗನಿಗೆ ಸಿಲಿಂಡರ್‌ ಕೊಟ್ಟಿದ್ದರಿಂದ ನಿನಗೆ ಕೊಡಲು ಬರುವುದಿಲ್ಲ ಎಂದು ಪಂಚಾಯಿತಿಯವರು ಹೇಳಿದ್ದಾರೆ. ಈಗಲೂ ಒಲೆ ಬಳಸುತ್ತಿದ್ದೇನೆ’ ಎಂದು ಬಾಯವ್ವ ಮಾಧ್ಯಮದವರಿಗೆ ತಿಳಿಸಿದರು.

25 ವರ್ಷಗಳ ಹಿಂದೆ ಬಾಯವ್ವ ಹಿಂಡಲಗಾ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದರು. ಈಗಲೂ ಅವರು ಮಣ್ಣಿನ ಮನೆಯಲ್ಲಿ
ವಾಸವಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಗೋವಿಂದ ಕಾರಜೋಳ, ‘ಬಾಯವ್ವ ಅವರ ಮನೆಯಲ್ಲಿ ಗ್ಯಾಸ್‌ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.