ADVERTISEMENT

ಸವದತ್ತಿ | ಆಟಿಕೆ, ಗೊಂಬೆಗಳ ನಡುವೆ ಗಣೇಶನ ಆರಾಧನೆ 

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 16:15 IST
Last Updated 28 ಆಗಸ್ಟ್ 2025, 16:15 IST
ಆಟಿಕೆಗಳು, ಗೊಂಬೆಗಳಿಂದ ಮಂಟಪ ಅಲಂಕರಿಸಿ ವಿಶಿಷ್ಠ ರೀತಿಯಲ್ಲಿ ಗಣೇಶನನ್ನು ಆರಾಧಿಸುತ್ತಿರುವ ಪ್ರಕಾಶ ಪ್ರಭುನವರ ಕುಟುಂಬ.
ಆಟಿಕೆಗಳು, ಗೊಂಬೆಗಳಿಂದ ಮಂಟಪ ಅಲಂಕರಿಸಿ ವಿಶಿಷ್ಠ ರೀತಿಯಲ್ಲಿ ಗಣೇಶನನ್ನು ಆರಾಧಿಸುತ್ತಿರುವ ಪ್ರಕಾಶ ಪ್ರಭುನವರ ಕುಟುಂಬ.   

ಸವದತ್ತಿ: ಸಾರ್ವಜನಿಕ ಮಂಟಪಗಳಲ್ಲಿ ವಿವಿಧ ಆಟಿಕೆ, ಗೊಂಬೆ ಇರಿಸಿ ಗಣೇಶೋತ್ಸವ ಆಚರಣೆ ಮಾಡುವುದು ಸಾಮಾನ್ಯ. ಆದರೆ, ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವ ಪ್ರಕಾಶ ಪ್ರಭುನವರ ಕುಟುಂಬ ತಮ್ಮ ಮನೆಯಲ್ಲೇ ಹತ್ತಾರು ಆಟಿಕೆಗಳು, ಗೊಂಬೆಗಳಿಂದ ಮಂಟಪ ಅಲಂಕರಿಸಿ ವಿಶಿಷ್ಠ ರೀತಿಯಲ್ಲಿ ಗಣೇಶನನ್ನು ಆರಾಧಿಸುತ್ತಿದೆ.

ಸವದತ್ತಿಯ ಪ್ರಭುನವರ ಓಣಿಯಲ್ಲಿ ಪ್ರಕಾಶ ಅವರ ಮನೆ ಇದೆ. ಅದರಲ್ಲಿ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ವಿದ್ಯುದ್ದೀಪಗಳಿಂದ ಮಂಟಪ ಸಿಂಗರಿಸಿ, ವಿವಿಧ ವಾಹನಗಳು, ಪ್ರಾಣಿಗಳು, ಪಕ್ಷಿಗಳು, ಸಂಗೀತ ವಾದ್ಯಗಳ ಆಟಿಕೆಗಳು, ಗೊಂಬೆಗಳನ್ನು ಇರಿಸಿದ್ದಾರೆ.

ನೇಗಿಲ ಹೊತ್ತ ರೈತ ಹಾಗೂ ರೈತನೊಬ್ಬ ತಮ್ಮ ಇಡೀ ಕುಟುಂಬದೊಂದಿಗೆ ಕೃಷಿ ಕಾಯಕಕ್ಕೆ ಹೊರಟಿರುವ ದೃಶ್ಯ ರೈತರ ಮೇಲಿನ ಕಾಳಜಿ ಮೆರೆಯುತ್ತಿದೆ.

ADVERTISEMENT

’ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಸಾಲದು. ಆಟಿಕೆಗಳಿಂದ ಮಂಟಪ ಅಲಂಕರಿಸಿ ಜನರನ್ನು ಸೆಳೆಯಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ ನಮ್ಮ ತಂದೆ ಬಸಪ್ರಭು ಕಳೆದ 60 ವರ್ಷಗಳಿಂದ ವಿಶಿಷ್ಠವಾಗಿ ಮಂಟಪ ಅಲಂಕರಿಸಿ ಹಬ್ಬ ಆಚರಿಸುತ್ತಿದ್ದಾರೆ. ನಾನು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ' ಎಂದು ಪ್ರಕಾಶ ಪ್ರಭುನವರ ತಿಳಿಸಿದರು.

ಏನೇನು ಪ್ರದರ್ಶನ?:

ಪ್ರಕಾಶ ಅವರ ಮನೆಯಲ್ಲಿ ವಿಂಟೇಜ್ ಕಾರ್, ಅಂಬಾಸಿಡರ್ ಕಾರ್, ಟ್ರಕ್, ಜೀಪ್, ಆಂಬುಲೆನ್ಸ್, ರೋಡ್ ರೋಲರ್ ಮತ್ತಿತರ ವಾಹನಗಳ ಮಾದರಿ ಆಟಿಕೆಗಳಿವೆ. ನಾಯಿ, ಹುಲಿ, ಸಿಂಹ, ಆನೆ, ಚಿಗರಿ ಮತ್ತಿತರ ಪ್ರಾಣಿಗಳು, ಅಳಿಲು ನವಿಲು ಮೊದಲಾದ ಪಕ್ಷಿಗಳ ಆಟಿಕೆಗಳು ಇವೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ವಿವಿಧ ಕಲಾ ಪ್ರಕಾರಗಳ ಸಂಗೀತ ವಾದ್ಯಗಳ ಆಟಿಕೆಗಳಿವೆ. ಬಸವಣ್ಣನ ಪ್ರತಿಮೆ ಗಮನ ಸೆಳೆಯುತ್ತಿದೆ. ಬಸವೇಶ್ವರ, ಅಲ್ಲಮಪ್ರಭು, ಚೆನ್ನಬಸವಣ್ಣ ಮತ್ತಿತರ ಭಾವಚಿತ್ರಗಳಿವೆ.

ಕನ್ಯಾಕುಮಾರಿಯಿಂದ ತರಿಸಿದ ಶಂಖವಿದೆ. ಮೈಸೂರು ದಸರಾದಲ್ಲಿ ನಡೆದ ಪ್ರದರ್ಶನ ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದ ತಂದಿರುವ ಗೊಂಬೆಗಳಿವೆ. ಎಂಟು ಅಡಿ ಉದ್ದ 10 ಅಡಿ ಅಗಲದ ಅಳತೆಯಲ್ಲಿ ಇವುಗಳನ್ನೆಲ್ಲ ಪ್ರದರ್ಶಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.