ADVERTISEMENT

ಆರ್ಥಿಕ ಸಂಕಷ್ಟದಲ್ಲಿ ಭೂತರಾಮನಹಟ್ಟಿ ಮೃಗಾಲಯ; ನೆರವಿಗೆ ಕೋರಿಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 13:55 IST
Last Updated 31 ಜುಲೈ 2020, 13:55 IST

ಬೆಳಗಾವಿ: ‘ಕೋವಿಡ್‌ ಪ್ರಭಾವ ಇಲ್ಲಿನ ಭೂತರಾಮನಹಟ್ಟಿ ಮೃಗಾಲಯದ ಮೇಲೂ ಬಿದ್ದಿದ್ದು, ಪ್ರಾಣಿಗಳನ್ನು ಸಲುಹಲು ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಸಾರ್ವಜನಿಕರು ನೆರವು ನೀಡಬೇಕು’ ಎಂದು ಬೆಳಗಾವಿ ಉಪಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಪಾಟೀಲ ಹೇಳಿದರು.

ಇಲ್ಲಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಹಿನ್ನೆಲೆಯಲ್ಲಿ ಜನರು ಪ್ರವಾಸಕ್ಕೆ ತೆರಳುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಮೃಗಾಲಯಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಕಳೆದ ವರ್ಷ 65 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ₹ 70 ಕೋಟಿಯಷ್ಟು ಹಣ ಸಂಗ್ರಹವಾಗಿತ್ತು. ಈ ವರ್ಷ ಕೇವಲ 5 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ’ ಎಂದು ನುಡಿದರು.

‘ನಗರದ ಪ್ರಮುಖ ಕೈಗಾರಿಕೆಗಳು, ವಾಣಿಜ್ಯೋದ್ಯಮಿಗಳು ತಮ್ಮ ಸಿಎಸ್‌ಆರ್‌ ಅನುದಾನದಡಿ ಮೃಗಾಲಯಗಳಿಗೆ ನೆರವು ನೀಡಬಹುದು. ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಬಹುದು. ಈ ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆ, ಹೈನಾ, ಕರಡಿ ಸೇರಿದಂತೆ ಸೇರಿದಂತೆ 172 ಪ್ರಾಣಿಗಳಿವೆ. ದಾನಿಗಳು, ಪ್ರಾಣಿಪ್ರಿಯರು ತಮ್ಮ ಕೈಲಾದ ಮಟ್ಟಿಗೆ ಆರ್ಥಿಕ ಸಹಾಯ ಮಾಡಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಎ ಅಡಿ ದಾನಿಗಳಿಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ’ ಎಂದರು.

ADVERTISEMENT

ಆ್ಯಪ್‌ ಡೌನ್‌ಲೋಡ್‌:‘ಮೃಗಾಲಯ ಪ್ರಾಧಿಕಾರ ಸಿದ್ಧಪಡಿಸಿರುವ zoo's of karnataka app ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬೇಕು.ಹೊಸ ಆ್ಯಪ್‌ನಲ್ಲಿ ರಾಜ್ಯದ 9 ಪ್ರಾಣಿಸಂಗ್ರಹಾಲಯಗಳ ಮಾಹಿತಿ ಲಭ್ಯವಿದೆ. ಪ್ರಾಣಿಗಳ ದತ್ತು ಪಡೆಯುವ ದಾನಿಗಳು ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು’ ಎಂದರು.

ಭೂತರಾಮನಹಟ್ಟಿ ರಾಣಿ ಚನ್ನಮ್ಮ ಮೃಗಾಲಯ ಆರ್‌ಎಫ್‌ಒ ಹಾಗೂ ಕ್ಯುರೇಟರ್ ರಾಕೇಶ ಅರ್ಜುನವಾಡ ಆ್ಯಪ್ ಬಳಕೆಯ ಮಾಹಿತಿ ನೀಡಿದರು. ಬೆಳಗಾವಿಯ ಬಸವರಾಜ ಪರವಿನಾಯ್ಕರ ಮತ್ತು ಸಮೀರ ಸಿರಗುಪ್ಪಿ ಎಂಬುವವರು ಈಗಾಗಲೇ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಪ್ರಾಣಿಗಳ ದತ್ತು ಪಡೆದಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.