ADVERTISEMENT

‘ಆತ್ಮ ನಿರ್ಭರ’ ಯೋಜನೆ ಸದ್ಬಳಕೆಗೆ ಸಲಹೆ: ಮಿಲಿಂದ್ರ ಬಾರಾಪತ್ರೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:29 IST
Last Updated 28 ಸೆಪ್ಟೆಂಬರ್ 2020, 14:29 IST
ಐಗಳಿಯ ಒಣದ್ರಾಕ್ಷಿ ಸಂಸ್ಕರಣ ಘಟಕದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಲಹೆಗಾರ ಎಂ.ಎಲ್. ಹಾಲಳ್ಳಿ ಮಾತನಾಡಿದರು
ಐಗಳಿಯ ಒಣದ್ರಾಕ್ಷಿ ಸಂಸ್ಕರಣ ಘಟಕದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಲಹೆಗಾರ ಎಂ.ಎಲ್. ಹಾಲಳ್ಳಿ ಮಾತನಾಡಿದರು   

ಐಗಳಿ: ‘ಕೇಂದ್ರ ಸರ್ಕಾರವು ಆತ್ಮ ನಿರ್ಭರ ಯೋಜನೆಯಲ್ಲಿ ಕೈಗಾರಿಕಾ ಘಟಕಗಳಿಗೆ ಬ್ಯಾಂಕ್‌ಗಳ ಮೂಲಕ ಶೇ. 20ರಷ್ಟು ಸಾಲ ಕೊಡುತ್ತದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆ ಇಲಾಖೆಯ ನಿರ್ದೇಶಕ ಮಿಲಿಂದ್ರ ಬಾರಾಪತ್ರೆ ಸಲಹೆ ನೀಡಿದರು.

ಇಲ್ಲಿನ ಕಲ್ಯಾಣ ನಗರದಲ್ಲಿರುವ ಒಣ ದ್ರಾಕ್ಷಿ ಸಂಸ್ಕರಣಾ ಸಮೂಹ ಘಟಕಕ್ಕೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.

‘ದ್ರಾಕ್ಷಿ ಬೆಳೆಗಾರರ ತೊಂದರೆಗಳನ್ನು ನಿವಾರಣೆ ಮಾಡುವುದಕ್ಕಾಗಿ ನಿರ್ಮಾಣಗೊಂಡಿರುವ ಒಣ ದ್ರಾಕ್ಷಿ ಸಂಸ್ಕರಣಾ ಸಮೂಹ ಘಟಕದಲ್ಲಿ ಹೊರ ದೇಶಗಳಿಂದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ತರಿಸಿಕೊಂಡು ವೈಜ್ಞಾನಿಕ ಮತ್ತು ಹೊಸ ತಂತ್ರಜ್ಞಾನದ ಸಹಾಯ ಪಡೆಯಬೇಕು. ಜಾಲತಾಣದಲ್ಲಿ ಮಾಹಿತಿ ಪಡೆದುಕೊಂಡು ಮಾರಾಟ ಮತ್ತು ರಫ್ತು ಹೆಚ್ಚಿಸಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ, ‘ಈ ಘಟಕದಲ್ಲಿ ಅಗತ್ಯ ಮೂಲಸೌಲಭ್ಯಗಳಿವೆ. ಒಣ ದ್ರಾಕ್ಷಿ ಜೊತೆಗೆ ಅರಿಸಿನ, ಮೆಣಸಿನಕಾಯಿ ಮೊದಲಾದವುಗಳನ್ನು ಪುಡಿ ಮಾಡಿ ಹೆಚ್ಚಿನ ಲಾಭದಲ್ಲಿ ಮಾರಾಟ ಮಾಡಬಹುದು. ಸಣ್ಣ ರೈತರಿಗೆ ಇದರಿಂದ ಲಾಭ ಸಿಗಲಿದೆ’ ಎಂದರು.

ಘಟಕದ ಸಲಹೆಗಾರ ಎಂ.ಎಲ್. ಹಾಲಳ್ಳಿ ಮಾತನಾಡಿದರು. ಘಟಕದ ಅಧ್ಯಕ್ಷ ಶಹಜಹಾನ ಡೊಂಗರಗಾಂವ, ಸಿ.ಎಚ್. ಪಾಟೀಲ, ಶ್ರೀಮಂತ ಮುಧೋಳ, ನೂರಅಹ್ಮದ್ ಡೊಂಗರಗಾಂವ, ಈರಗೌಡ ಪಾಟೀಲ, ದಸ್ತಗೀರ ಕೊರಬು, ಕಾಶಿನಾಥ ಕುಂಬಾರಕರ, ಆರ್.ಆರ್. ತೆಲಸಂಗ ಇದ್ದರು.

ಬಂದೇನಮಾಜ ಮುಜಾವರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.