ADVERTISEMENT

ಬೆಳಗಾವಿ: 6 ಸಾವಿರ ವಚನ, 400 ಕೃತಿಗಳ ರಚನೆ, ಜಚನಿ ಸ್ವಾಮೀಜಿ ತವರೂರು ಕಡೆಗಣನೆ

ಜಚನಿ ಮನೆಯನ್ನು ಸ್ಮಾರಕವಾಗಿಸುವುದೇ ಸರ್ಕಾರ?

ಪ್ರದೀಪ ಮೇಲಿನಮನಿ
Published 24 ಜುಲೈ 2022, 7:06 IST
Last Updated 24 ಜುಲೈ 2022, 7:06 IST
ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿಯಲ್ಲಿ ಜಚನಿ ಸ್ವಾಮೀಜಿ ಜನ್ಮ ತಳೆದ ಮನೆ
ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿಯಲ್ಲಿ ಜಚನಿ ಸ್ವಾಮೀಜಿ ಜನ್ಮ ತಳೆದ ಮನೆ   

ಚನ್ನಮ್ಮನ ಕಿತ್ತೂರು: ಆರು‌ ಸಾವಿರಕ್ಕೂ ಹೆಚ್ಚು ವಚನಗಳು ಹಾಗೂ 400 ಮೌಲ್ಯಯುತ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಗದ್ಗುರು ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ್ಯ ನಿಡುಮಾಮಿಡಿ (ಜಚನಿ) ಸ್ವಾಮೀಜಿ ಜನ್ಮತಳೆದ ತಾಲ್ಲೂಕಿನ ಅಂಬಡಗಟ್ಟಿ ಗ್ರಾಮ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

‘ಹಿರಿಯ ಸಾಹಿತಿಯ ತವರೂರು ಅಭಿವೃದ್ಧಿಯಾಗಬೇಕು. ಅವರ ಕೃತಿಗಳನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು’ ಎಂಬ ಕೂಗು ಅವರ ಶಿಷ್ಯ ಬಳಗದ್ದು. ಆದರೆ, ಸರ್ಕಾರ ಸ್ಪಂದಿಸಿಲ್ಲ.

ಅಂಬಡಗಟ್ಟಿಗೆ ಹೋಗಿ ‘ಜಚನಿ ಅವರ ಮನೆ ಎಲ್ಲಿದೆ?’ ಎಂದು ಕೇಳಿದರೆ, ಇಂದಿನ ಪೀಳಿಗೆಗೆ ಅವರ ಪರಿಚಯವೇ ಇಲ್ಲವಾಗಿದೆ. ‘ಅಂಥ ಹೆಸರಿನವರು ಇಲ್ಲಿಲ್ಲ. ಬೇರೆ ಊರಿನವರಿರಬೇಕು ನೋಡಿ’ ಎಂಬ ಉತ್ತರ ಯುವಕರಿಂದ ಸಿಗುತ್ತದೆ.

ADVERTISEMENT

‘ಸತೀಶಣ್ಣಾ ಜಾರಕಿಹೊಳಿ ಕಲ್ಯಾಣ ಮಂಟಪ’ದ ಮುಖ್ಯಸ್ಥ ಹಬೀಬ ಶಿಲೇದಾರ ಅವರು ಮಂಟಪದ ಮಹಾದ್ವಾರಕ್ಕೆ ಶ್ರೀಗಳ ಹೆಸರು ನಾಮಕರಣ ಮಾಡಿದ್ದಾರೆ. ಊರಿನ ಖಾಸಗಿ ಪ್ರೌಢಶಾಲೆಗೆ ಜಚನಿ ನಾಮಕರಣ ಮಾಡಲಾಗಿದೆ. ಉಳಿದಂತೆ ಅವರನ್ನು ಸ್ಮರಿಸುವ ಕೆಲಸವಾಗಿಲ್ಲ.

ಸಾಹಿತ್ಯಾರಾಧಕ ಸ್ವಾಮೀಜಿ: ‘1909ರ ಅ.20ರಂದು ಅಂಬಡಗಟ್ಟಿಯಲ್ಲಿ ಜನಿಸಿದ ಜಚನಿ ಅವರ ಪೂರ್ವಾಶ್ರಮದ ಹೆಸರು ಚಂದ್ರಶೇಖರ. ದುಂಡಯ್ಯ ಮತ್ತು ತಾಯವ್ವ ದಂಪತಿ ಪುತ್ರ. ಚಿಕ್ಕವರಿದ್ದಾಗಲೇ ತಾಯಿ ಕಳೆದುಕೊಂಡಿದ್ದರಿಂದ ಓದಿಗೆ ತೊಂದರೆ ಆಯಿತು. ನಂತರ ಶಿವಮೊಗ್ಗದ ಶಿವಯೋಗ ಮಂದಿರಕ್ಕೆ ಅವರನ್ನು ಸೇರಿಸಲಾಯಿತು. ಅಲ್ಲಿ ಅಧ್ಯಯನ ಮಾಡಿ, ಕನ್ನಡದ ಜೊತೆಗೆ ಇಂಗ್ಲಿಷ್‌, ಸಂಸ್ಕೃತ ಭಾಷೆಯಲ್ಲೂ ಪ್ರಾವೀಣ್ಯ ಗಳಿಸಿದರು. ಅಲ್ಲಿಯೇ ಅವರನ್ನು ಗ್ರಂಥಾಲಯದ ಉಸ್ತುವಾರಿಯಾಗಿ ನೇಮಿಸಲಾಯಿತು. ಬಳಿಕ, ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನ ನಿಡುಮಾಮಿಡಿ ಮಠದ ಪೀಠಾಧಿಪತಿಯಾಗಿ ಅವರು ಪಟ್ಟಕ್ಕೇರಿದರು. 1939ರಿಂದ ಜಚನಿ ಸ್ವಾಮೀಜಿ ಎಂದೇ ಗುರುತಿಸಿಕೊಂಡಿದ್ದರು. 1996ರಲ್ಲಿ ಅವರ ದೇಹಾಂತ್ಯವಾಗಿದೆ’ ಎಂದು ಚನ್ನಮ್ಮ ಕಿತ್ತೂರಿನ ರಾಜಶೇಖರ ಕೋಟಿ ಮಾಹಿತಿ ನೀಡುತ್ತಾರೆ.

ಸ್ಮಾರಕವಾಗಿಸಲಿ: ‘ಬಹಳ ವರ್ಷಗಳ ಹಿಂದೆ ಶಾಸಕ ಬಿ.ಎಸ್‌.ಯಡಿಯೂರಪ್ಪ ಅಂಬಡಗಟ್ಟಿಯ ಜಚನಿ ಜನ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಶ್ರೀಗಳು ಜನ್ಮತಳೆದ ಮನೆ ಸ್ಮಾರಕವಾಗಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ಮಠದ ಈಗಿನ ಪೀಠಾಧಿಪತಿ ಅವರಾದರೂ ಈ ಸ್ಥಳವನ್ನು ಸ್ಮಾರಕ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂಬುದು ಹಬೀಬ ಶಿಲೇದಾರ ಆಗ್ರಹ.

ಸ್ವಾಮೀಜಿ ಜನ್ಮ ತಳೆದ ಮನೆಯಲ್ಲಿ ಅವರ ಸಹೋದರರ ಮಕ್ಕಳಿದ್ದಾರೆ. ಮನೆಯೂ ಶಿಥಿಲಾವಸ್ಥೆಯಲ್ಲಿದೆ. ‘ಸ್ಮಾರಕ ನಿರ್ಮಿಸುವುದಾದರೆ ನಮಗೆ ಪರ್ಯಾಯ ವ್ಯವಸ್ಥೆ ಮಾಡಿ. ಮನೆ ಬಿಟ್ಟುಕೊಡಲು ಸಿದ್ಧ’ ಎನ್ನುತ್ತಾರೆ ಸಂಬಂಧಿಕರು.

‘ಹಲವು ವರ್ಷಗಳಿಂದ ಅನೇಕರು ಇಲ್ಲಿಗೆ ಭೇಟಿ ನೀಡಿದ್ದಾರೆ. ಇದನ್ನು ಸುಧಾರಣೆ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ. ನಂತರ ತಿರುಗಿ ನೋಡುವುದೇ ಇಲ್ಲ’ ಎಂದು ಕುಟುಂಬದವರು ಬೇಸರಿಸಿದರು.

*
ನಾಡಿನ ಮಹಾನ್ ಸ್ವಾಮೀಜಿಯಾಗಿದ್ದ ಜಚನಿ ತವರೂರಿನಲ್ಲಿ ಅವರನ್ನು ಸ್ಮರಿಸುವ ಕಾರ್ಯವಾಗಬೇಕು. ಅವರ ಜನ್ಮತಳೆದಿರುವ ಮನೆಯನ್ನು ಸರ್ಕಾರ ಸ್ಮಾರಕ ಎಂದು ಘೋಷಿಸಬೇಕು
-ಹಬೀಬ ಶಿಲೇದಾರ, ಗ್ರಾಮದ ಗಣ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.