ಬೆಳಗಾವಿ: ‘ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ, ನಗರದಲ್ಲಿ ವಾಲ್ಮೀಕಿ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಕಾರರು, ರಮೇಶ ಕತ್ತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ, ರಮೇಶ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಬೆಂಕಿ ಹಚ್ಚಿದರು.
ವಾಲ್ಮೀಕಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ, ‘ಜವಾಬ್ದಾರಿ ಸ್ಥಾನದಲ್ಲಿ ಇರುವ ರಮೇಶ ಕತ್ತಿ ಅವರು ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಶೋಷಿತ ಸಮುದಾಯ ಹೀಯಾಳಿಸಿದ ಅವರಿಗೆ ಮುಂದೆ ಪ್ರತ್ಯುತ್ತರ ಕೊಡುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.
ಮುಖಂಡರಾದ ದಿನೇಶ ಬಾಗಡೆ, ಮಹೇಶ ಶೀಗಿಹಳ್ಳಿ, ಸುರೇಶ ಗವನ್ನವರ, ಪಾಂಡುರಂಗ ನಾಯಿಕ, ಸಂಜಯ ನಾಯಿಕ, ಪರಶುರಾಮ ಢಗೆ, ಮಲಗೌಡ ಪಾಟೀಲ, ಸಿದ್ದು ಸುಣಗಾರ, ಮಂಜುನಾಥ ಚಿಕ್ಕಲದಿನ್ನಿ, ಅಂಜನಕುಮಾರ ಗಂಡಗುದರಿ ಇತರರಿದ್ದರು.
‘ಕತ್ತಿ ಬಂಧಿಸಿದ್ದರೆ ಅ.24ಕ್ಕೆ ಬೆಳಗಾವಿ ಬಂದ್’
‘ರಮೇಶ ನೀಡಿದ ಹೇಳಿಕೆಯಿಂದ ನಮಗೆ ನೋವಾಗಿದೆ. ಬೇರೆ ಬೇರೆ ಸಮುದಾಯಗಳ ಮಧ್ಯೆ ಸಂಘರ್ಷ ತಲೆದೋರುವ ಸಾಧ್ಯತೆ ಇದೆ. ತಕ್ಷಣವೇ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ವಾಲ್ಮೀಕಿ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ವಿವಿಧ ಸಮುದಾಯಗಳಿಂದ ಅ.24ರಂದು ಬೆಳಗಾವಿ ಬಂದ್‌ಗೆ ಕರೆ ಕೊಡಲಾಗುವುದು’ ಎಂದು ರಾಜಶೇಖರ ತಳವಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.