ADVERTISEMENT

ವಂದೇ ಭಾರತ್‌ ಶ್ರೇಯಸ್ಸು ಪ್ರಧಾನಿಗೆ ಸಲ್ಲಬೇಕು: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 4:55 IST
Last Updated 10 ಆಗಸ್ಟ್ 2025, 4:55 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ, ಸಂಸದ ಜಗದೀಶ ಶೆಟ್ಟರ್‌</p></div>

ಪ್ರಧಾನಿ ನರೇಂದ್ರ ಮೋದಿ, ಸಂಸದ ಜಗದೀಶ ಶೆಟ್ಟರ್‌

   

ಬೆಳಗಾವಿ: ‘ಲೋಕಸಭೆ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಬೆಳಗಾವಿ– ಬೆಂಗಳೂರು ವಂದೇ ಭಾರತ್ ರೈಲಿಗೆ ಆ.10ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್‌ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಗಸ್ಟ್ 4ರಂದು ಮೋದಿ ಅವರನ್ನು ಭೇಟಿ ಆಗಿದ್ದೆ. ಒಂದೇ ದಿನದಲ್ಲಿ ಅವರು ರೈಲ್ವೆ ಸಚಿವರಿಗೆ ನಿರ್ದೇಶನ ನೀಡಿದರು. ಇದರ ಸಂಪೂರ್ಣ ಶ್ರೇಯಸ್ಸು ಮೋದಿಯವರಿಗೆ ಸಲ್ಲುತ್ತದೆ. ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ, ಅಶ್ವಿನಿ ವೈಷ್ಣವ, ವಿ.ಸೋಮಣ್ಣ ಕೂಡ ಸ್ಪಂದಿಸಿದ್ದರು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ ಸೇರಿ ರೈಲ್ವೆ ಅಧಿಕಾರಿಗಳು ಹಾಗೂ ಮಾಧ್ಯಮಗಳು ಶ್ರಮಿಸಿವೆ’ ಎಂದರು.

ADVERTISEMENT

ರಾಹುಲ್ ಗಾಂಧಿ ಅಪ್ರಬುದ್ಧ: ‘ವಿಪಕ್ಷ ನಾಯಕ ರಾಹುಲ್ ಗಾಂಧಿ ಎಂಥ ಅಪ್ರಬುದ್ಧ ನಾಯಕ ಎಂಬುದಕ್ಕೆ ಪದೇಪದೇ ಪ್ರದರ್ಶನ ನೀಡುತ್ತಿದ್ದಾರೆ. ಸಂಸತ್ತಿನಲ್ಲಿ ಸರಿಯಾದ ಚರ್ಚೆ ಮಾಡಲೂ ಬರುವುದಿಲ್ಲ. ಬರೀ ಗಲಾಟೆ ಮಾಡುತ್ತಾರೆ. ಮತಗಳ್ಳತನ ವಿಚಾರದಲ್ಲಿ ತೀರ ಹುಡುಗಾಟ ಮಾಡುತ್ತಿದ್ದಾರೆ. ಇವರ ಬಳಿ ದಾಖಲೆ ಇದ್ದರೆ ನ್ಯಾಯಾಲಯಕ್ಕೆ ಹೋಗಬೇಕು. ಅಥವಾ ಚುನಾವಣಾ ಆಯೋಗಕ್ಕೆ ದೂರು ಕೊಡಬೇಕು. ಯಾವುದನ್ನೂ ಮಾಡಲು ಇವರು ಸಿದ್ಧರಿಲ್ಲ. ಆದರೆ, ಹಾದಿಬೀದಿಯಲ್ಲಿ ಹುಚ್ಚರಂತೆ ಮಾತಾಡುತ್ತಾರೆ’ ಎಂದೂ ಕಿಡಿ ಕಾರಿದರು.

‘ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರಕ್ಕೆ ಬರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾರರಿದ್ದಾರೆ ಎಂದು ರಾಹುಲ್, ಸಿದ್ದರಾಮಯ್ಯ ಆರೋಪಿಸಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್‌ ಗೆದ್ದಿದೆ ಅಲ್ಲಿ ಎಲ್ಲವೂ ಸರಿಯಾಗಿದೆ, ಎಲ್ಲಿ ಬಿಜೆಪಿ ಗೆದ್ದಿದೆ ಅಲ್ಲಿ ಮಾತ್ರ ಮತಗಳ್ಳತನ ಆಗಿದೆ ಎಂದು ಆರೋಪಿಸುತ್ತಾರೆ. ಇಂಥವರಿಗೆ ಏನು ಹೇಳಬೇಕು’ ಎಂದೂ ಬೇಸರ ವ್ಯಕ್ತಪಡಿಸಿದರು. 

‘ಜಗತ್ತಿನ ಎಂಟು ಪ್ರಭಾವಿ ನಾಯಕರಲ್ಲಿ ಮೋದಿ ಕೂಡ ಒಬ್ಬರು. ಅವರ ಖ್ಯಾತಿಗೆ ಚ್ಯುತಿ ತರಲು ಕಾಂಗ್ರೆಸ್‌ ನಾಯಕರು ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ನಡೆದಾಗ ನಿಮ್ಮದೇ ಸರ್ಕಾರವಿತ್ತು. ಆಗ ನಿಮ್ಮ ಚುನಾವಣಾಧಿಕಾರಿಗಳು ಏನು ಮಾಡುತ್ತಿದ್ದರು’ ಎಂದೂ ಶೆಟ್ಟರ್‌ ಪ್ರಶ್ನಿಸಿದರು.

ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮುಖಂಡರಾದ ಹನುಮಂತ ಕೊಂಗಾಲಿ, ರಾಜಶೇಖರ ಡೋಣಿ, ಮಲ್ಲಿಕಾರ್ಜುನ ಮಾದಮ್ಮನವರ, ಸಚಿನ ಕಡಿ ಇದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.