ADVERTISEMENT

ಬೆಳಗಾವಿ | ರೈತರ ಬೇಡಿಕೆ ಈಡೇರಿಕೆಗೆ ಆನ್‌ಲೈನ್‌ ಚಳವಳಿ

​ಪ್ರಜಾವಾಣಿ ವಾರ್ತೆ
Published 7 ಮೇ 2020, 5:14 IST
Last Updated 7 ಮೇ 2020, 5:14 IST
ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆಯವರು ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಬುಧವಾರ ಆನ್‌ಲೈನ್ ಚಳವಳಿ ನಡೆಸಿದರು
ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆಯವರು ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಬುಧವಾರ ಆನ್‌ಲೈನ್ ಚಳವಳಿ ನಡೆಸಿದರು   

ಬೆಳಗಾವಿ: ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆಯವರು ಸವದತ್ತಿ ತಾಲ್ಲೂಕಿನ ಮುಗಳಿಹಾಳ ಗ್ರಾಮದಲ್ಲಿ ಬುಧವಾರ ಆನ್‌ಲೈನ್ ಚಳವಳಿ ನಡೆಸಿದರು.

‘ಮೈಕ್ರೊ ಫೈನಾನ್ಸ್‌ ಹಾಗೂ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡಬೇಕು. ಬಿತ್ತನೆಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಉಚಿತವಾಗಿ ನೀಡಬೇಕು. ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಬ್ಬರಿಗೆ ವರ್ಷಕ್ಕೆ ನೀಡುವ ಕೆಲಸದ ದಿನಗಳನ್ನು 100ರಿಂದ 200ಕ್ಕೆ ವಿಸ್ತರಿಸಬೇಕು. ಕೂಲಿಯನ್ನು ₹ 600ಕ್ಕೆ ಹೆಚ್ಚಿಸಬೇಕು. ವಲಸೆ ಕಾರ್ಮಿಕರಿಗೆ ಆಹಾರ, ವಸತಿ, ಔಷಧಗಳನ್ನು ಒದಗಿಸಬೇಕು’ ಎಂಬಿತ್ಯಾದಿ ಬೇಡಿಕೆಗಳ ಪೋಸ್ಟರ್‌ಗಳನ್ನು ಕೃಷಿ ಕಾರ್ಮಿಕರು ಪ್ರದರ್ಶಿಸಿದರು.

ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗಿದೆ.

ADVERTISEMENT

‘ಬಡ ಹಾಗೂ ಮಧ್ಯಮ ರೈತರಿಗೆ ಅಗತ್ಯವಿರುವಷ್ಟು ಬಡ್ಡಿರಹಿತ ದೀರ್ಘಾವಧಿ ಸಾಲ ನೀಡಬೇಕು. ಕೃಷಿ ಉತ್ಪನ್ನಗಳನ್ನು ಖರೀದಿಗೆ ಸಮರ್ಪಕ ವ್ಯವಸ್ಥೆ ಮಾಡಬೇಕು. ಕಾರ್ಪೊರೇಟ್‌ ಶಕ್ತಿಗಳಿಂದ ಕೃಷಿ,ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳನ್ನು ಮುಕ್ತಗೊಳಿಸಬೇಕು. ಪೊಟಾಶ್‌ನಿಂದ ತಯಾರಿಸಿದ ರಸಗೊಬ್ಬರಗಳಿಗೆ ಶೇ.9ರಷ್ಟು ಸಬ್ಸಿಡಿ ಕಡಿತಗೊಳಿಸುವ ನಿರ್ಧಾರ ಹಿಂಪಡೆಯಬೇಕು. ಕೃಷಿ ಕಾರ್ಮಿಕರು, ಬಡ ಹಾಗೂ ಮಧ್ಯಮ ರೈತರ ಜೀವನಾಧಾರಕ್ಕಾಗಿ ವಿಶೇಷ ಪ್ಯಾಕೆಜ್ ಘೋಷಿಸಬೇಕು. ಕೃಷಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು’ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಲಕ್ಕಪ್ಪ ಬಿಜ್ಜನ್ನವರ ಒತ್ತಾಯಿಸಿದರು.

ಸಂಘಟನೆಯ ರಮೇಶ ದಳವಾಯಿ, ಬಸಪ್ಪ ದಳವಾಯಿ, ಈರಪ್ಪ ಹಸಬಿ, ಪದ್ಮಾವತಿ ಮಠಪತಿ ಮತ್ತು ಕೃಷಿ ಕಾರ್ಮಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.