ADVERTISEMENT

MES ನಿಷೇಧಕ್ಕೆ ಆಗ್ರಹ: ಈಡುಗಾಯಿ ಒಡೆಯುವ ಮೂಲಕ ಚಳವಳಿ: ವಾಟಾಳ್‌ ನಾಗರಾಜ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 14:44 IST
Last Updated 24 ಏಪ್ರಿಲ್ 2025, 14:44 IST
   

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಿಷೇಧಕ್ಕೆ ಒತ್ತಾಯಿಸಿ ಹಾಗೂ ಸ್ಮೃತಿ ಭವನ ನಿರ್ಮಾಣ ವಿರೋಧಿಸಿ, ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಎಂಇಎಸ್‌ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದರು. ಅವರನ್ನು ಪೊಲೀಸರು ತಡೆದಾಗ, ಪರಸ್ಪರರ ಮಧ್ಯೆ ವಾಗ್ವಾದ ನಡೆಯಿತು. ಪೊಲೀಸರ ವಿರುದ್ಧ ಘೋಷಣೆ ಕೂಗಿದ ವಾಟಾಳ್‌ ನಾಗರಾಜ್, ‘ನೀವು ಮರಾಠಿಗರ ಏಜೆಂಟರಾ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕೆಂದು ಹಲವು ವರ್ಷಗಳಿಂದ ಹೋರಾಡುತ್ತಿದ್ದೇವೆ. ಈ ಬಗ್ಗೆ ಭರವಸೆ ನೀಡಿದ್ದ ಯಾವುದೇ ನಾಯಕರು ಬೇಡಿಕೆ ಈಡೇರಿಸಿಲ್ಲ. ಇದನ್ನು ಖಂಡಿಸಿ ಏ.26ರಂದು ರಾಜ್ಯದಾದ್ಯಂತ ಕೋಟಿ ಈಡುಗಾಯಿ ಒಡೆಯುವ ಚಳವಳಿ ನಡೆಸಲಾಗುವುದು’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಮರಾಠಿಗರ ಗುಲಾಮರಾಗಿದ್ದಾರೆ. ಮತ್ತೊಂದೆಡೆ ಗಡಿ ಉಸ್ತುವಾರಿ ಸಚಿವರನ್ನೂ ನೇಮಿಸಿಲ್ಲ. ಹಾಗಾದರೆ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ನೋಡಿಕೊಳ್ಳುವವರು ಯಾರು’ ಎಂದು ಪ್ರಶ್ನಿಸಿದರು.

‘ಬೆಳಗಾವಿ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಈವರೆಗೆ ಬೆಳಗಾವಿಗೆ ಏನೇನು ಕೊಡುಗೆ ನೀಡಿದ್ದೀರಿ ಎಂದು ಶ್ವೇತಪತ್ರ ಹೊರಡಿಸಬೇಕು’ ಎಂದು ಸವಾಲು ಹಾಕಿದರು.

‘ಬೆಳಗಾವಿಯಲ್ಲಿ ಸ್ಮೃತಿ ಭವನ ನಿರ್ಮಾಣಕ್ಕೆ ಎಂಇಎಸ್‌ನವರಿಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. ಒಂದುವೇಳೆ ಕೊಟ್ಟರೆ ರಾಜ್ಯದಲ್ಲಿ ಕ್ರಾಂತಿಯೇ ಆಗುತ್ತದೆ ಆಗುತ್ತದೆ. ಎಂಇಎಸ್‌ನವರು ಕರ್ನಾಟಕವೆಂದರೆ ಪಾಕಿಸ್ತಾನ್‌ ಎಂದು ತಿಳಿದಿದ್ದಾರೆ. ಅವರನ್ನು ಗಡೀಪಾರು ಮಾಡಬೇಕು’ ಎಂದು ಆಗ್ರಹಿಸಿದರು.

‘ಮಹಾರಾಷ್ಟ್ರದ ಕೊಯ್ನಾ, ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದು ಸುಮ್ಮನಾದರೆ ಸಾಲದು. ಮಹಾರಾಷ್ಟ್ರ ಸಿ.ಎಂ ಭೇಟಿಯಾಗಿ ಮಾತುಕತೆ ನಡೆಸಿ ನೀರು ಬಿಡಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಮೌಢ್ಯ ಕೆಲವರಲ್ಲಿದೆ. ಹಾಗಾಗಿ ಮಹದೇಶ್ವರ ಬೆಟ್ಟದ ಬದಲಿಗೆ, ಚಾಮರಾಜನಗರದಲ್ಲಿ ಸಂಪುಟ ಸಭೆ ಮಾಡಬೇಕಿತ್ತು. ಆದರೆ, ಸಿದ್ದರಾಮಯ್ಯ ಮೌಢ್ಯಕ್ಕೆ ಮತ್ತೆ ಬೆಲೆ ಕೊಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.