ADVERTISEMENT

ಬೆಳಗಾವಿ ಅಧಿವೇಶನ: ಉ.ಕ ಸಮಸ್ಯೆ ಚರ್ಚಿಸಲು ವಾಟಾಳ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 10:50 IST
Last Updated 8 ಡಿಸೆಂಬರ್ 2018, 10:50 IST
ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ವಾಟಾಳ್‌ ನಾಗರಾಜ್‌  ಪ್ರತಿಭಟನೆ ಮಾಡಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ವಾಟಾಳ್‌ ನಾಗರಾಜ್‌  ಪ್ರತಿಭಟನೆ ಮಾಡಿದರು.   

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇದೇ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆಯಾಗಬೇಕು ಎಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಆಗ್ರಹಿಸಿದರು.

ಸುವರ್ಣ ವಿಧಾನಸೌಧದ ಬಳಿ ಶನಿವಾರ ಪ್ರತಿಭಟನೆ ನಡೆಸಿದ ಅವರು, ‘ಬೆಳಗಾವಿ ಅಧಿವೇಶನವು ರಾಜಕಾರಣಿಗಳಿಗೆ ಜಾತ್ರೆ ಇದ್ದಂತಾಗಿದೆ. ಇಲ್ಲಿಗೆ ಬಂದು ಹತ್ತು ದಿನ ಜಾತ್ರೆ ಮಾಡಿ ಹೋಗುತ್ತಿದ್ದಾರೆಯೇ ಹೊರತು, ಅಧಿವೇಶನದಲ್ಲಿ ಗಂಭೀರವಾಗಿ ಪಾಲ್ಗೊಳ್ಳುತ್ತಿಲ್ಲ. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿಲ್ಲ’ ಎಂದು ಆರೋಪಿಸಿದರು.

ಪ್ರತ್ಯೇಕವಾಗಿ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿಯೊಬ್ಬರನ್ನು ನೇಮಕ ಮಾಡಬೇಕು. ಅವರು ಇಲ್ಲಿಂದಲೇ ಆಡಳಿತ ನಡೆಸುವಂತಾಗಬೇಕು. ಯಾರೊಬ್ಬ ಸಚಿವರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಐಷಾರಾಮಿ ವಿಮಾನದಲ್ಲಿ ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ADVERTISEMENT

ನಿರೀಕ್ಷಿತ ಮಟ್ಟದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಹೈದರಾಬಾದ್‌– ಕರ್ನಾಟಕಕ್ಕಾಗಿ ರೂಪಿಸಲಾಗಿರುವ 371 (ಜೆ) ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಇಂತಹ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೆಲಹೊತ್ತು ವಿಧಾನಸೌಧದ ಪ್ರವೇಶ ದ್ವಾರದ ಬಳಿ ಮಲಗಿ ಪ್ರತಿಭಟನೆ ನಡೆಸಿದರು. ಪೊಲೀಸರು ವಶಕ್ಕೆ ಪಡೆದು, ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.