
ನಂದಗಡ (ಬೆಳಗಾವಿ ಜಿಲ್ಲೆ): ಸಂಗೊಳ್ಳಿ ರಾಯಣ್ಣ ಹಾಗೂ ಅವರ ಸಹಚರರ ಗಲ್ಲಿಗೇರಿಸಿದ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ನಿರ್ಮಿಸಿದ ‘ವೀರಭೂಮಿ’ ಮತ್ತು ಇತರ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.19ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ.
ಇದರೊಂದಿಗೆ ವಸ್ತು ಸಂಗ್ರಹಾಲಯ ಮತ್ತು ಕೆರೆಯ ಮಧ್ಯೆ ನಿರ್ಮಿಸಿರುವ ರಾಯಣ್ಣನ ಪ್ರತಿಮೆಯನ್ನೂ ಲೋಕಾರ್ಪಣೆ ಮಾಡುವರು. ಮಧ್ಯಾಹ್ನ 12ಕ್ಕೆ ನಂದಗಡದ ಎನ್.ಆರ್.ಇ ಸಂಸ್ಥೆಯ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವ ಶಿವರಾಜ ತಂಗಡಗಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳುವರು.
ಏನಿದು ವೀರಭೂಮಿ: ರಾಯಣ್ಣನನ್ನು ನೇಣಿಗೇರಿಸಿದ ಮರ ಹಾಗೂ ಸುತ್ತಲಿನ ಪ್ರದೇಶವನ್ನು ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿ ‘ವೀರಭೂಮಿ’ ಎಂಬ ಪ್ರೇಕ್ಷಣೀಯ ಸ್ಥಳ ರೂಪಿಸಲಾಗಿದೆ.
ಸುತ್ತಲೂ ಕೋಟೆ ಕಟ್ಟಲಾಗಿದ್ದು, ಒಳಗೆ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಅವರ ಬದುಕು, ಹೋರಾಟ, ತ್ಯಾಗಗಳನ್ನು ಪ್ರತಿಬಿಂಬಿಸುವ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.
200 ವರ್ಷಗಳ ಹಿಂದಿನ ಯಶೋಗಾಥೆಯನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಮೂರ್ತಿ ಶಿಲ್ಪ, ಉಬ್ಬುಶಿಲ್ಪ, ಚಿತ್ರ ಫಲಕ, ಮಾಹಿತಿ ಫಲಕ, ಕಿರುಚಿತ್ರ, ಕಥಾಚಿತ್ರ ಹಾಗೂ ವಿಶ್ಲೇಷಣಾ ಫಲಕ, ರೋಬೋಟಿಕ್ ತಂತ್ರಜ್ಞಾನ, ಡೈಮೆನ್ಷನ್ ಚಿತ್ರಮಂದಿರ ಹಾಗೂ ಧ್ವನಿ ಪ್ರಭಾವಗಳೊಂದಿಗೆ ನೋಡುಗರ ಮನಸ್ಸಿನಲ್ಲಿ ಮೇಲೆ ಪ್ರಭಾವ ಬೀರುವಂತೆ ಮಾಡಲಾಗಿದೆ.
ರಾಯಣ್ಣನ ಕಾರ್ಯಸ್ಥಾನಗಳಾಗಿದ್ದ ಹಂಡಿ ಬಡಗನಾಥ ಮಠ, ಸಂಪಗಾವಿ ತಾಲ್ಲೂಕು ಕಚೇರಿ, ಕುಲಕರ್ಣಿ ಮತ್ತು ರಾಯಣ್ಣನ ಸಂಘರ್ಷ, ಸುರಪುರದ ಅರಮನೆ, ರಹಸ್ಯ ಚಟುವಟಿಕೆ, ಕವಳಿ ಗುಡ್ಡ ಮುಂತಾದವು ರೋಬೋಟಿಕ್ ತಂತ್ರಜ್ಞಾನದಲ್ಲಿ ಮೂಡಿಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.