ADVERTISEMENT

ಬೆಳಗಾವಿ: ಉಚಿತ ವಸತಿ ನಿಲಯದ ಕನಸು–ನನಸು

‘ದಾನಿ ಲಿಂ.ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ’ ಎಂದು ನಾಮಕರಣ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:01 IST
Last Updated 11 ಡಿಸೆಂಬರ್ 2025, 4:01 IST
ಬೆಳಗಾವಿಯ ಸುಭಾಷ ನಗರದಲ್ಲಿ ನಿರ್ಮಿಸಿದ ‘ಲಿಂ.ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ’ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ
ಬೆಳಗಾವಿಯ ಸುಭಾಷ ನಗರದಲ್ಲಿ ನಿರ್ಮಿಸಿದ ‘ಲಿಂ.ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ’ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ   

ಬೆಳಗಾವಿ: ವೀರಶೈವ ಲಿಂಗಾಯತ ಸಮಾಜದ ಬಡ ಹೆಣ್ಣುಮಕ್ಕಳು, ಅದರಲ್ಲಿಯೂ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಅಖಿಲ ಭಾರತ ವೀರಶೈವ ಮಹಾಸಭೆ ಬೆಳಗಾವಿ ಜಿಲ್ಲಾ ಘಟಕದಿಂದ ಉಚಿತ ವಸತಿ ನಿಲಯ ನಿರ್ಮಿಸಲಾಗಿದೆ. ಇದಕ್ಕೆ ದಾನಿಗಳಾದ ಲಿಂ.ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ ಅವರ ಹೆಸರು ಇಡಲಾಗಿದೆ. ಡಿ.11ರಂದು ಮಧ್ಯಾಹ್ನ 12.30ಕ್ಕೆ ಈ ಹಾಸ್ಟೆಲ್‌ ಉದ್ಘಾಟನೆ ಆಗಲಿದೆ.

ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯಲು ಬೆಳಗಾವಿಗೆ ಬವರು ಬಡ ಹೆಣ್ಣುಮಕ್ಕಳಿಗಾಗಿ ವಿದ್ಯಾರ್ಥಿನಿ ನಿಲಯವನ್ನು ಸ್ಥಾಪಿಸಬೇಕೆಂಬುದು ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರ ಕನಸಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಪ್ರಭಾಕರ ಕೋರೆ ಹಾಗೂ ತಂಡದವರು ಅವರ ಸಹಕಾರ ಪಡೆದರು. ಇಲ್ಲಿನ ಸುಭಾಷ್ ನಗರದ ಎಸ್ಪಿ ಆಫೀಸ್ ಪಕ್ಕದಲ್ಲಿ 24 ಗುಂಟೆ ನಿವೇಶನವನ್ನು ಪಡೆದು ಕಾಮಗಾರಿಗೆ ಚಾಲನೆ ನೀಡಿದ್ದು ಒಂದು ಮೈಲುಗಲ್ಲು. ಈಗ ಸುಂದರ, ಸುಸಜ್ಜಿತ ಕಟ್ಟಡ ತಲೆ ಎತ್ತಿನಿಂತಿದೆ.

‘ಈ ಮಹತ್ ಕಾರ್ಯವನ್ನು ಒಬ್ಬರೇ ನೆರವೇರಿಸುವಷ್ಟು ವೀರಶೈವ ಲಿಂಗಾಯತ ಸಮಾಜದಲ್ಲಿ  ಶ್ರೀಮಂತರು ಇದ್ದಾರೆ. ಆದರೆ, ಇದು ಸಮಾಜದ ಕೆಲಸ. ಎಲ್ಲರೂ ಜೊತೆಯಾಗಬೇಕು’ ಎಂಬುದು ಪ್ರಭಾಕರ ಕೋರೆ ಅವರ ಸಂಕಲ್ಪವಾಗಿತ್ತು. ಅವರ ಕರೆಗೆ ಓಗೊಟ್ಟು ಅನೇಕ ದಾನಿಗಳು ಮುಂದೆ ಬಂದರು. ಉದ್ಯಮಿಗಳಾದ ಮಹೇಶ ಬೆಲ್ಲದ ಅವರು ₹1 ಕೋಟಿ ಉದಾರ ದಾನ ನೀಡಿದ್ದಾರೆ. ಹಾಗಾಗಿ, ಈ ಉಚಿತ ವಸತಿ ನಿಲಯಕ್ಕೆ ಅವರ ತಾಯಿ ‘ಲಿಂ. ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ’ ಎಂದು ನಾಮಕರಣ ಮಾಡಲಾಗಿದೆ. ಪ್ರಸ್ತುತ 21 ಕೋಣೆಗಳನ್ನು ಹೊಂದಿದ್ದು, ಪ್ರತಿಯೊಂದು ಕೋಣೆಗೂ ದಾನಿಗಳ ಹೆಸರು ಇಡಲಾಗುತ್ತಿದೆ.

ADVERTISEMENT

ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ವಸತಿ ನಿಲಯದ ಪ್ರಧಾನ ಕಾರ್ಯದರ್ಶಿ ಡಾ.ಪ್ರೀತಿ ಕೋರೆ ದೊಡವಾಡ ಹಾಗೂ ಪದಾಧಿಕಾರಿಗಳ ಕೊಡುಗೆಯೂ ಅಗಾಧವೆನಿಸಿದೆ.

ಪ್ರಸಕ್ತ ವರ್ಷವೇ ಕಾರ್ಯಾರಂಭ

ವಿಶ್ವಗುರು ಬಸವಣ್ಣನವರ ಕೃಪಾಶೀರ್ವಾದದಿಂದ ಶೀಘ್ರವಾಗಿ ಅತ್ಯಂತ ಸುಂದರವಾಗಿ ಅತ್ಯಾಧುನಿಕ ಸೌರ‍್ಯಗಳೊಂದಿಗೆ ವಸತಿನಿಲಯ ಸಿದ್ಧಗೊಂಡಿದೆ. ವಿದ್ಯಾರ್ಥಿನಿಯರು ಭವಿಷ್ಯ ರೂಪಿಸಿಕೊಂಡರೆ ನಮ್ಮ ಶ್ರಮ ಸಾರ್ಥಕ. ಒಂದು ಶಿಸ್ತು ಸಮಿತಿಯು ಈ ವಸತಿ ನಿಲಯವನ್ನು ಸದಾ ಕಾರ್ಯನಿರ್ವಹಿಸಲಿದೆ. ಪ್ರಸಕ್ತ ವರ್ಷದಿಂದಲೇ ವಸತಿ ನಿಲಯ ಕಾರ್ಯಾರಂಭ ಮಾಡಿದ್ದು ಹೆಮ್ಮೆಯ ಸಂಗತಿ. –ಪ್ರಭಾಕರ ಕೋರೆ ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ * ಗ್ರಾಮೀಣ ಬಡ ಹೆಣ್ಣುಮಕ್ಕಳ ಆಶಾಕಿರಣ ಶಿಕ್ಷಣವೆಂಬುದು ಶ್ರೇಷ್ಠವಾದ ಅಸ್ತ್ರ. ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕು. ಶಿಕ್ಷಣಕ್ಕಾಗಿ ನೀಡುವ ದಾನವು ಇನ್ನೂ ಶ್ರೇಷ್ಠ. ಬೆಳಗಾವಿಯಲ್ಲಿ ವೀರಶೈವ ಬಡ ಗ್ರಾಮೀಣ ಹೆಣ್ಣುಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯ ಕಟ್ಟುತ್ತಿರುವುದು ಕಂಡು ತುಂಬ ಸಂತೋಷವಾಯಿತು. ಬಸವಾದಿ ಶರಣರ ಕೃಪೆಯಿಂದ ಸಾಧ್ಯವಾದಷ್ಟು ಸಹಾಯ ಮಾಡಿದ್ದೇನೆ. –ಮಹೇಶ ಬೆಲ್ಲದ ಉದ್ಯಮಿ ದಾನಿ * ಪ್ರಭಾಕರ ಕೋರೆಯವರ ಮತ್ತೊಂದು ಅಪ್ರತಿಮ ಕೊಡುಗೆ ಇದು. ಈ ಮೂಲಕ ಸಮಾಜದ ಹೆಣ್ಣುಮಕ್ಕಳಿಗೆ ಶೈಕ್ಷಣಿಕವಾಗಿ ಶಕ್ತಿ ತುಂಬಿದ್ದಾರೆ. ಹಿಡಿದ ಕಾರ್ಯವನ್ನು ಅಚಲವಾಗಿ ಪೂರೈಸಿ ವಿದ್ಯಾರ್ಥಿ ನಿಲಯಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಿದ್ದಾರೆ. –ರತ್ನಪ್ರಭಾ ಬೆಲ್ಲದ ಅಧ್ಯಕ್ಷೆ ವೀರಶೈವ ಲಿಂಗಾಯತ ಮಹಿಳಾ ವಸತಿ ಗೃಹ ಕ್ಷೇಮಾಭಿವೃದ್ಧಿ ಸಂಘ

ವಸತಿ ನಿಲಯದ ವೈಶಿಷ್ಟ್ಯತೆ

18800 ಚದರ್‌ ಅಡಿ ವಿಸ್ತೀರ್ಣದಲ್ಲಿ ಹಾಗೂ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅತ್ಯಾಧುನಿಕ ಸ್ಪರ್ಶ ನೀಡಲಾಗಿದೆ. 21 ಕೋಣೆಗಳಿದ್ದು ಎಲ್ಲಡೆ ರ‍್ಯಾಕ್‌ಗಳನ್ನು ಅಟ್ಯಾಚ್ ಸ್ನಾನ ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ವಿಶಾಲವಾದ ಅಧ್ಯಯನ ಕೋಣೆ ಗ್ರಂಥಾಲಯ ಊಟದ ಹಾಲ್ ಬಟ್ಟೆಗಳನ್ನು ತೊಳೆದುಕೊಳ್ಳಲು ವಾಶ್‌ಮಷಿನ್ ಶುದ್ಧ ಕುಡಿಯುವ ನೀರು ಉದ್ಯಾನ ನಿರ್ಮಿಸಲಾಗಿದೆ. ಎಲ್ಲಕ್ಕೂ ಮುಖ್ಯವಾಗಿ ವಿದ್ಯಾರ್ಥಿನಿಯರಲ್ಲಿ ಬಸವ ಸಂಸ್ಕೃತಿ ಚಿಂತನೆ ಮೂಡಿಸುವ ಗೃಹ ವಾತಾವರಣವನ್ನು ನಿರ್ಮಿಸಲಾಗಿದೆ.

ಹಾಸ್ಟೆಲ್‌ ಉದ್ಘಾಟನೆ ಇಂದು

ಉಚಿತ ವಸತಿ ನಿಲಯ ಉದ್ಘಾಟನೆ ಹಾಗೂ ನಾಮಕರಣ ಸಮಾರಂಭ ಇಲ್ಲಿನ ಸುಭಾಷ ನಗರದ ಎಸ್ಪಿ ಆಫೀಸ್‌ ಎದುರಿಗಿನ ಕಟ್ಟಡದಲ್ಲಿ ಡಿ.11ರಂದು ಮಧ್ಯಾಹ್ನ 12.30ಕ್ಕೆ ನೆರವೇರಿಲಿದೆ. ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅರಣ್ಯ ಸಚಿವ ಮಹಾಸಭೆ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಎಂ.ಬಿ.ಪಾಟೀಲ ಡಾ.ಶರಣಪ್ರಕಾಶ ಪಾಟೀಲ ಶಿವಾನಂದ ಪಾಟೀಲ ಎಸ್.ಎಸ್. ಮಲ್ಲಿಕಾರ್ಜುನ ಶರಣಬಸಪ್ಪ ದರ್ಶನಾಪೂರ ಲಕ್ಷ್ಮೀ ಹೆಬ್ಬಾಳಕರ ಮಹಾಸಭೆ ರಾಜ್ಯಾಧ್ಯಕ್ಷ ಶಂಕರ ಬಿದರಿ ದಾನಿ ಮಹೇಶ ಬಿ. ಬೆಲ್ಲದ ಆಗಮಿಸಲಿದ್ದಾರೆ. ಮಹಾಸಭೆ ಉಪಾಧ್ಯಕ್ಷ ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಸತಿ ನಿಲಯದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಪ್ರಧಾನ ಕಾರ್ಯದರ್ಶಿ ಡಾ.ಪ್ರೀತಿ ದೊಡವಾಡ ‍ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.