ADVERTISEMENT

ತೆಲಸಂಗ: 50 ವಿದ್ಯಾರ್ಥಿಗಳ ಕಾಲೇಜು ಶುಲ್ಕ ಭರಿಸಿದ ಗ್ರಾಮಸ್ಥರು

ಕೊಟ್ಟಲಗಿಯಲ್ಲಿ ಮಾದರಿ ನಡೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 15:33 IST
Last Updated 14 ಜನವರಿ 2021, 15:33 IST
ತೆಲಸಂಗ ಸಮೀಪದ ಕೊಟ್ಟಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಪಿಯು ಕಾಲೇಜು ಪ್ರಾರಂಭವಾಗಿದ್ದು, ಶಾಸಕ ಮಹೇಶ ಕುಮಠಳ್ಳಿ ಭೇಟಿ ನೀಡಿದರು
ತೆಲಸಂಗ ಸಮೀಪದ ಕೊಟ್ಟಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಪಿಯು ಕಾಲೇಜು ಪ್ರಾರಂಭವಾಗಿದ್ದು, ಶಾಸಕ ಮಹೇಶ ಕುಮಠಳ್ಳಿ ಭೇಟಿ ನೀಡಿದರು   

ತೆಲಸಂಗ: ಸಮೀಪದ ಕೊಟ್ಟಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಕಲಾ, ವಾಣಿಜ್ಯ, ವಿಜ್ಞಾನ ಪಿಯು ಕಾಲೇಜು ಪ್ರಾರಂಭಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆ. ಅಲ್ಲಿಗೆ ಈಗ ದಾಖಲಾಗಿರುವ 50 ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಗ್ರಾಮಸ್ಥರೇ ಭರಿಸುವ ಮೂಲಕ ಗಮನಸೆಳೆದಿದ್ದಾರೆ.

ಗ್ರಾಮಕ್ಕೆ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಈ ಮಾಹಿತಿ ನೀಡಿದರು.

ಅಲ್ಲಿನ ಸಾಮಾಜಿಕ ಕಾರ್ಯಕರ್ತ ಡಾ.ರವಿ ಸಂಖ ಮಾತನಾಡಿ, ‘ಈವರೆಗೆ ದಾಖಲಾದ ಐವತ್ತು ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಗ್ರಾಮಸ್ಥರೇ ಭರಿಸಿದ್ದೇವೆ. ಅವರಿಗೆ ಪ್ರೋತ್ಸಾಹ ನೀಡುವುದು ಹಾಗೂ ಗ್ರಾಮದಲ್ಲಿ ಕಾಲೇಜು ಇರುವಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ. ಇದರಿಂದ ಬಡ ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯಲಿ ಎನ್ನುವ ಆಶಯವಿದೆ. ಶಿಕ್ಷಣ ದಾಸೋಹಕ್ಕಾಗಿ ಸಹಕಾರ ಕೊಡಲು ಸದಾ ಸಿದ್ಧವಿದ್ದೇವೆ’ ಎಂದರು.

ADVERTISEMENT

ಶಾಸಕ ಕುಮಠಳ್ಳಿ ಮಾತನಾಡಿ, ‘ಕರ್ನಾಟಕ– ಮಹಾರಾಷ್ಟ್ರದ ಗಡಿಯಲ್ಲಿನ ಮಕ್ಕಳ ಕಲಿಕೆಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ನೂತನ ಕಲಾ, ವಾಣಿಜ್ಯ, ವಿಜ್ಞಾನ ಪಿಯು ಕಾಲೇಜು ಪ್ರಾರಂಭಕ್ಕೆ ಸರ್ಕಾರದಿಂದ ಅನುಮತಿ ಕೊಡಿಸಲಾಗಿದೆ. ಗಡಿಯಲ್ಲಿನ ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

‘ಉತ್ತಮ ಅಂಕ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಗಳಿಸಬೇಕೆಂಬ ನಮ್ಮ ಬಯಕೆಯನ್ನು ನೀವು ಈಡೇರಿಸಬೇಕು’ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖಂಡ ಸಿದರಾಯ ಯಲ್ಲಡಗಿ ಮಾತನಾಡಿ, ‘ಅನೇಕ ವರ್ಷಗಳ ಬೇಡಿಕೆ ಇದಾಗಿತ್ತು. 10ನೇ ತರಗತಿ ನಂತರ ಕಲಿಕೆಗಾಗಿ ನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಕೆಲ ಬಡ ಹಾಗೂ ಹೆಣ್ಣು ಮಕ್ಕಳು ಇದು ಸಾಧ್ಯವಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಈಗ ಪಿಯು ಕಾಲೇಜು ಮುಂಜೂರಾಗಿ ಕಾರ್ಯಾರಂಭಗೊಂಡಿದೆ. ಉಪನ್ಯಾಸಕರು ತಮ್ಮ ವಿಷಯದಲ್ಲಿ ಶೇ 100ರಷ್ಟು ಅಂಕವನ್ನು ಮಕ್ಕಳು ಪಡೆಯುವಂತೆ ಕಾಳಜಿ ವಹಿಸಿ ಬೋಧಿಸಬೇಕು. ಅಂತಹ ಶಿಕ್ಷಕರಿಗೆ 5 ಗ್ರಾಂ. ಚಿನ್ನವನ್ನು ಉಡುಗೊರೆಯಾಗಿ ನೀಡಲಾಗುವುದು’ ಎಂದು ಘೋಷಿಸಿದರು.

ಪ್ರಭಾರ ಪ್ರಾಚಾರ್ಯ ಎಸ್.ಟಿ. ಮಜ್ಜಗಿ, ಗ್ರಾಮದ ಹಿರಿಯರಾದ ಗುರು ಮುಗ್ಗನವರ, ಶಿವು ಬಡವಗೋಳ, ಬಸಗೊಂಡ ಅನಂತಪೂರ, ಮಹೇಶ ಬಂಡರಗೋಟಿ, ಶಿವು ತೇಲಿ, ಕೊಂಡಿ, ಶಿಕ್ಷಕರಾದ ಸಿ.ಬಿ.ಹುಣಶ್ಯಾಳ, ಅನೀಲ ಮಾಲಗಾರ, ಸಿದರಾಯ ತಾಂವಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.