ಪ್ರಸನ್ನ ಕುಲಕರ್ಣಿ
ಖಾನಾಪುರ: ತಾಲ್ಲೂಕಿನ ಜಾಂಬೋಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುಟ್ಟ ಗ್ರಾಮ ವಿಜಯನಗರ(ಗೌಳಿವಾಡಾ) ಜನರ ಪಾಲಿಗೆ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಸ್ವಾತಂತ್ರ್ಯ ದೊರೆತು 77 ವರ್ಷಗಳ ನಂತರ, ಈ ಗ್ರಾಮಸ್ಥರು ತಮ್ಮೂರಿಗೆ ಸಂಪರ್ಕ ರಸ್ತೆ ಪಡೆದಿದ್ದಾರೆ.
ಖಾನಾಪುರ ಪಟ್ಟಣದಿಂದ 18 ಕಿ.ಮೀ, ಜಾಂಬೋಟಿಯಿಂದ 6 ಕಿ.ಮೀ ದೂರದಲ್ಲಿ ವಿಜಯನಗರ ಇದೆ. ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯಿಂದ 3 ಕಿ.ಮೀ ಒಳಗೆ, ತಗ್ಗು ಪ್ರದೇಶದಲ್ಲಿ ನೆಲೆನಿಂತ ಊರಿನ ಜನಸಂಖ್ಯೆ ಸುಮಾರು 1,000 ಇದೆ. ಗೌಳಿ ಸಮುದಾಯದ 200 ಕುಟುಂಬ ವಾಸಿಸುತ್ತಿವೆ.
ಹೈನುಗಾರಿಕೆ ಮತ್ತು ಕೃಷಿಯೇ ಗ್ರಾಮಸ್ಥರ ಪ್ರಮುಖ ಕಸುಬು. ಈ ಗ್ರಾಮಕ್ಕೆ ಮುಂಚೆ ಉತ್ತಮ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಬಹುತೇಕ ರಸ್ತೆ ಇಳಿಜಾರಿನಿಂದ ಕೂಡಿದ್ದರಿಂದ ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗಿತ್ತು. ಮಳೆಗಾಲದಲ್ಲಿ ಧಾರಾಕಾರ ಸುರಿಯುವ ಮಳೆಯಿಂದಾಗಿ ಮಣ್ಣಿನ ರಸ್ತೆ ಕೆಸರುಮಯವಾಗುತ್ತಿತ್ತು. ಸರ್ಕಸ್ ಮಾಡುತ್ತಲೇ ಜನ ಸಂಚರಿಸುತ್ತಿದ್ದರು. ಹಲವು ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದರು.
ಪ್ರತಿವರ್ಷ ಮಳೆಗಾಲ ಮುಗಿದ ನಂತರ ಗ್ರಾಮ ಪಂಚಾಯಿತಿಯವರು ಹಾಗೂ ಗ್ರಾಮದ ಹಿರಿಯರು ಸೇರಿಕೊಂಡು ಅಲ್ಪ ಹಣದಲ್ಲಿ ರಸ್ತೆ ದುರಸ್ತಿ ಮಾಡಿಕೊಂಡು ಬಳಸುತ್ತಿದ್ದರು.
ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಜತ್ತ–ಜಾಂಬೋಟಿ ಹೆದ್ದಾರಿಯಿಂದ ವಿಜಯನಗರ ಗ್ರಾಮದವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಿದ್ದರು. ಈಗ ಸುಸಜ್ಜಿತ ರಸ್ತೆ ನಿರ್ಮಾಣಗೊಂಡಿದ್ದು, ಜನರು ಸಂತಸಗೊಂಡಿದ್ದಾರೆ.
‘ಅರಣ್ಯದಿಂದ ಸುತ್ತುವರಿದ, ಇಳಿಜಾರು ಪ್ರದೇಶದಲ್ಲಿರುವ ವಿಜಯನಗರ ಗ್ರಾಮಕ್ಕೆ ರಸ್ತೆ ಅವಶ್ಯಕತೆ ಇರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೆವು. ಹಾಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ನೀಡಿದ್ದರು. ಈ ಅನುದಾನದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ’ ಎಂದು ಜಾಂಬೋಟಿ ಪಿಡಿಒ
ಪ್ರಕಾಶ ಕುಡಚಿ ತಿಳಿಸಿದರು.
ಇಷ್ಟುದಿನ ನಮ್ಮೂರಿಗೆ ಸರಿಯಾದ ರಸ್ತೆ ಇಲ್ಲದ್ದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದೆವು. ಈಗ ರಸ್ತೆ ನಿರ್ಮಾಣವಾದ ಕಾರಣ ಖುಷಿಯಾಗಿದೆಬೊಮ್ಮು ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.