ADVERTISEMENT

ಬೆಳಗಾವಿ | ಬಿಮ್ಸ್ ಆಸ್ಪತ್ರೆ ಎದುರು ಆಂಬುಲೆನ್ಸ್‌ಗೆ ಬೆಂಕಿ ಇಟ್ಟ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 19:30 IST
Last Updated 22 ಜುಲೈ 2020, 19:30 IST
ಸುಟ್ಟು ಕರಕಲಾಗಿರುವ ಆಂಬುಲೆನ್ಸ್
ಸುಟ್ಟು ಕರಕಲಾಗಿರುವ ಆಂಬುಲೆನ್ಸ್   
""

ಬೆಳಗಾವಿ: ಇಲ್ಲಿನ ಬಿಮ್ಸ್‌ ಆಸ್ಪತ್ರೆ ಎದುರು ನಿಲ್ಲಿಸಿದ್ದಆಂಬುಲೆನ್ಸ್‌ಗೆ ಕಿಡಿಗೇಡಿಗಳಗುಂಪೊಂದು ಬುಧವಾರ ರಾತ್ರಿ ಬೆಂಕಿ ಹಚ್ಚಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

55 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಆಂಬುಲೆನ್ಸ್‌ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಇಬ್ಬರು ವೈದ್ಯರು ಹಾಗೂ ಸಿಬ್ಬಂದಿಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ಕಾನ್‌ಸ್ಟೆಬಲ್ ಒಬ್ಬರು ಗಾಯಗೊಂಡಿದ್ದಾರೆ. ಒಂದು ಪೊಲೀಸ್ ವಾಹ‌ನ, ಹಿಂಡಲಗಾ ಜೈಲಿಗೆ ಸೇರಿದ ವಾಹನ ಹಾಗೂ ನಾಲ್ಕು ಖಾಸಗಿ ಕಾರುಗಳ ಮೇಲೆಯೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಆ ವಾಹನಗಳ ಗಾಜುಗಳು ಪುಡಿ ಪುಡಿಯಾಗಿವೆ. ಕೆಲ ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.

ADVERTISEMENT

ಮುಖ್ಯದ್ವಾರದಲ್ಲಿರುವ ಸೋಂಕು ನಿವಾರಕ ಸುರಂಗ ಮಾರ್ಗದ ಮೇಲೆ ಕಲ್ಲೆಸೆದು ಒಡೆದು ಹಾಕಲಾಗಿದೆ. ಗಂಟಲು ದ್ರವ ಸಂಗ್ರಹಿಸುವ ಘಟಕಕ್ಕೂ ಹಾನಿ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಆಂಬುಲೆನ್ಸ್‌ನಲ್ಲಿದ್ದ ಚಾಲಕ, ನರ್ಸ್ ಆಸ್ಪತ್ರೆ ಒಳಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ವೈದ್ಯರೊಂದಿಗೆ ಕೆಲ ಕಿಡಿಗೇಡಿಗಳು ವಾಗ್ವಾದ ನಡೆಸಿದ್ದಾರೆ. ಹೋಗುವಾಗ ಹೊರಗೆ ನಿಲ್ಲಿಸಿದ್ದ ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವೈದ್ಯರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು. ಮೃತರ ಕಡೆಯವರು ಎಷ್ಟೇ ನೋವಿನಲ್ಲಿದ್ದರೂ ಇಂತಹ ಕೃತ್ಯ ಎಸಗಬಾರದಿತ್ತು. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘108 ಆಂಬುಲೆನ್ಸ್‌ನಲ್ಲಿ ಯಾರೂ ಇರಲಿಲ್ಲ. ಆಸ್ಪತ್ರೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಆದರೆ, ಅಲ್ಲಿದ್ದವರು ತಡೆದಿದ್ದಾರೆ. 30ರಿಂದ 40 ಮಂದಿ ಇದ್ದರು ಎಂದು ತಿಳಿದುಬಂದಿದೆ. ಆಸ್ಪತ್ರೆಯ ಸುತ್ತ ಇನ್ನೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಪ್ರತಿಕ್ರಿಯಿಸಿ ‘ಬೆಳಗಾವಿಯ ವ್ಯಕ್ತಿಯೊಬ್ಬರು ಜುಲೈ 19ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಐಸಿಯುಗೆ ಸ್ಥಳಾಂತರಿಸುವಾಗ ವ್ಯಕ್ತಿ ಮೃತರಾಗಿದ್ದಾರೆ. ಅವರ ಸಂಬಂಧಿಕರು ಕಲ್ಲು ತೂರಾಟ ನಡೆಸಿದ್ದಾರೆ. ಆಂಬುಲೆನ್ಸ್‌ಗೆ ಬೆಂಕಿ ಇಟ್ಟಿದ್ದಾರೆ. ಇಂತಹ ಘಟನೆಗಳು ನಡೆಯಬಾರದು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಮಾಡುತ್ತಿದ್ದಾರೆ ಎನ್ನುವುದನ್ನು ಮರೆಯಬಾರದು’ ಎಂದರು.

‘ವೈದ್ಯಕೀಯ ಸಿಬ್ಬಂದಿ ಆತಂಕಗೊಂಡಿದ್ದರು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಭದ್ರತೆಯನ್ನು ಹೆಚ್ಚಿಸಲಾಗುವುದು. ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು. ಆಸ್ಪತ್ರೆ ಸುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಬಂಧಿತ ಆರೋಪಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.