ADVERTISEMENT

‘ವಿಶ್ವಕರ್ಮರು ಪ್ರಪ್ರಥಮ ಲಿಪಿಕಾರರು’

ಜಿಲ್ಲಾಡಳಿತ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 13:36 IST
Last Updated 17 ಸೆಪ್ಟೆಂಬರ್ 2018, 13:36 IST
ಬೆಳಗಾವಿಯಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಸಂಸದ ಸುರೇಶ ಅಂಗಡಿ ಸೋಮವಾರ ಪುಷ್ಪನಮನ ಸಲ್ಲಿಸಿದರು
ಬೆಳಗಾವಿಯಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಸಂಸದ ಸುರೇಶ ಅಂಗಡಿ ಸೋಮವಾರ ಪುಷ್ಪನಮನ ಸಲ್ಲಿಸಿದರು   

ಬೆಳಗಾವಿ: ಸಮಾಜಕ್ಕೆ ವಿಶ್ವಕರ್ಮ ಸಮುದಾಯದವರ ಕೊಡುಗೆ ಅಪಾರವಾಗಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

‘ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಬೇಕಾದ ವಸ್ತುಗಳನ್ನು ಈ ಸಮಾಜದವರು ತಯಾರಿಸಿ ಕೊಡುತ್ತಾರೆ. ಅವರು ಎಲ್ಲರಿಗೂ ಬೇಕಾದವರು’ ಎಂದು ತಿಳಿಸಿದರು.

ADVERTISEMENT

‘ಹೋರಾಟಗಾರರಿಗೆ ಆಯುಧಗಳನ್ನು ತಯಾರಿಸಿ ಕೊಟ್ಟು, ತಮ್ಮದೇ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲೂ ಸೇವೆ ಸಲ್ಲಿಸಿದ್ದಾರೆ. ವಿಮಾನ, ರಾಕೆಟ್, ನೌಕೆ ತಯಾರಿಕೆಯಲ್ಲೂ ಕೊಡುಗೆ ಕೊಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಪರಿಹಾರ ನಿಧಿಗೆ:

‘ಮೆರವಣಿಗೆ ರದ್ದು ಮಾಡಿ ಆ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿರುವುದು ಸಂತಸದ ವಿಷಯ’ ಎಂದು ಸಮಾಜದ ಮುಖಂಡರನ್ನು ಅಭಿನಂದಿಸಿದರು.

ಉಪನ್ಯಾಸ ನೀಡಿದ ಸಾಹಿತಿ ಭೀಮಸೇನ ಬಡಿಗೇರ, ‘ದೇವಶಿಲ್ಪಿ ವಿಶ್ವಕರ್ಮರು ದೇವತೆಗಳಿಗೆ ಆಯುಧ ಹಾಗೂ ಸಿಂಹಾಸನಗಳನ್ನು ತಯಾರಿಸಿ ಕೊಟ್ಟಿದ್ದರು ಎಂಬ ಕುರಿತು ಪುರಾಣಗಳಿಂದ ತಿಳಿದುಬರುತ್ತದೆ. ಭಾಗವತ, ಪುರಾಣ ಹಾಗೂ ಉಪನಿಷತ್‌ಗಳಲ್ಲಿ ವಿಶ್ವಕರ್ಮರ ಕುರಿತು ಉಲ್ಲೇಖಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ, ಮಹಾರಾಜರು ಶಿಲ್ಪಕಲೆಗೆ ಹೆಚ್ಚಿನ ಮಹತ್ವ ನೀಡಿ ಸಮುದಾಯದವರನ್ನು ಪೋಷಿಸಿದ್ದಾರೆ. ಶಿಲ್ಪಶಾಸ್ತ್ರಕ್ಕೆ ಸಂಬಂಧಿಸಿದಂತೆ 340 ಗ್ರಂಥಗಳು ಲಭ್ಯ ಇವೆ. ಈ ಪ್ರಕಾರ, ವಿಶ್ವಕರ್ಮರು ಪ್ರಪ್ರಥಮ ಲಿಪಿಕಾರರಾಗಿದ್ದಾರೆ’ ಎಂದು ವಿವರಿಸಿದರು.

ರೈತರ ಬೆನ್ನೆಲುಬು:

‘ದೇಶದ ಬೆನ್ನೆಲುಬು ರೈತರಾದರೆ, ರೈತರ ಬೆನ್ನೆಲುಬು ವಿಶ್ವಕರ್ಮರು. ಸಮುದಾಯದ ಏಳಿಗೆಗೆ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ತಾಂತ್ರಿಕ ತರಬೇತಿ ನೀಡಿ, ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳುವ ಕುರಿತು ಚಿಂತಿಸಬೇಕು. ಶಿಲ್ಪಶಾಸ್ತ್ರ ಹಾಗೂ ಸಮುದಾಯದ ಕುರಿತು ರಾಜ್ಯ ಸರ್ಕಾರ ಪುಸ್ತಕ ಪ್ರಕಟಿಸಬೇಕು. ವಿಶ್ವಕರ್ಮ ಎಂಬ ಹೆಸರಿನ ಮುಂದೆ ದೇವಶಿಲ್ಪಿ ಎಂದು ನಮೂದಿಸುವಂತೆ ಆದೇಶ ಮಾಡಬೇಕು’ ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಅನಿಲ ಬೆನಕೆ ಮಾತನಾಡಿ, ‘ವಿಶ್ವಕರ್ಮರು ಹಿಂದೂ ಸಮಾಜದ ನಿರ್ಮಾತೃಗಳು ಹಾಗೂ ಜಗತ್ತಿನ ಸೃಷ್ಟಿಕರ್ತರಾಗಿದ್ದಾರೆ. ಯಾವುದೇ ವೃತ್ತಿಯೂ ಕೀಳಲ್ಲ. ಕೆಲಸವನ್ನು ಹೆಮ್ಮೆಯಿಂದ ಮಾಡಬೇಕು’ ಎಂದರು.

ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ, ಎಸಿಪಿ ಶಂಕರ ಮಾರಿಹಾಳ, ವಿಶ್ವಕರ್ಮ ನಿಗಮದ ಅಧ್ಯಕ್ಷ ಬಸವಣ್ಣೆಪ್ಪ ಬಡಿಗೇರ ಇದ್ದರು.

ಶಹಾಪುರದ ಕಾಳಿಕಾ ಮಹಿಳಾ ಮಂಡಳದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಜಿ.ಎಸ್. ಸೋನಾರ ನಿರೂಪಿಸಿದರು. ಪಾಲಿಕೆ ಸದಸ್ಯ ಅಜ್ಜಪ್ಪ ಬಡಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.