ADVERTISEMENT

ಜನ ನನ್ನನ್ನು ನಂಬಿ ಲಕ್ಷ್ಮಿಗೆ ಮತ ಹಾಕಿದ್ದಾರೆ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 12:55 IST
Last Updated 25 ಡಿಸೆಂಬರ್ 2020, 12:55 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಮೇಲೆ ನಾನು ಸೇಡು ತೀರಿಸಿಕೊಳ್ಳುತ್ತಿಲ್ಲ. ಆದರೆ, ನಮ್ಮ ಕ್ಷೇತ್ರ ಮತ್ತೆ ವಶಕ್ಕೆ ಪಡೆಯಲು ಶ್ರಮಿಸುತ್ತಿದ್ದೇನೆ. ಹೋದ ಚುನಾವಣೆಯಲ್ಲಿ ನಮ್ಮ ಜನರು ನನ್ನನ್ನು ನಂಬಿ ಮತ ಹಾಕಿದ್ದಾರೆ. ಮುಂದೆ, ಶಾಸಕಿ ನಂಬಿ ಮತ ಹಾಕಿದರೆ ಆಗ ಶಾಸಕಿಗೆ ಮಾಲೆ ಹಾಕೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಶುಕ್ರವಾರ ಹೇಳಿದರು.

‘ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಆಪರೇಷನ್ ಕಮಲ ಮಾಡುತ್ತಿದ್ದೀರಿ ಎನ್ನಲಾಗುತ್ತಿದೆಯಲ್ಲಾ’ ಎಂಬ ಪ್ರಶ್ನೆಗೆ, ‘ಜಿಲ್ಲಾ ಉಸ್ತುವಾರಿ ಸಚಿವ ಆಗಿರುವುದರಿಂದ ಜಿಲ್ಲೆಯ ಎಲ್ಲ 18 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ’ ಎಂದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿನ ಸಂಘಟನಾ ಚಾತುರ್ಯ ನೋಡಿ ಬಹಳ ಖುಷಿಯಾಗಿದೆ. ಕಾಂಗ್ರೆಸ್‌ನಲ್ಲಿ 20 ವರ್ಷ ಶಾಸಕನಾಗಿದ್ದಾಗ ಚುನಾವಣೆ ಬಂದಾಗ ಮಾತ್ರ ಓಡಾಡುತ್ತಿದ್ದುದ್ದನ್ನು ನೋಡಿದ್ದೆ. ಆದರೆ, ಬಿಜೆಪಿಯಲ್ಲಿ ಕೆಳಮಟ್ಟದ ಕಾರ್ಯಕರ್ತರಿಗೂ ಕಿಮ್ಮತ್ತಿದೆ. ಸಂಘ ಪರಿವಾರ ಮತ್ತು ಪಕ್ಷದ ಪ್ರಮುಖ ನಾಯಕರ ಸಲಹೆ ಪಡೆದು ಜಿಲ್ಲೆಯಾದ್ಯಂತ ಗೆಲ್ಲಲು ಪ್ರಯತ್ನಿಸುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

‘ಗ್ರಾಮೀಣ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಹೇಗೆ ಸಂಘಟನೆ ಮಾಡಿದ್ದೆವು ಎನ್ನುವುದನ್ನು ನೋಡಿದ್ದೀರಿ. ಅವರು (ಲಕ್ಷ್ಮಿ ಹೆಬ್ಬಾಳಕರ) ಹೇಗೆ ಶಾಸಕಿಯಾದರು ಮತ್ತು ಹೇಗೆ ತಯಾರಿ ಮಾಡಿದ್ದೆವು ಎನ್ನುವುದು ಗೊತ್ತಿದೆ. ಆದರೆ, ಗೆದ್ದ ನಂತರ ಬೇರೆ ರೂಪ ಪಡೆದಿದೆ. ಆ ಶಾಸಕಿ ಬಗ್ಗೆ ಮಾತನಾಡಬೇಡಿ ಎಂದು ಪಕ್ಷದವರು ಎಚ್ಚರಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಆದರೆ, ಅಲ್ಲಿ ನಮ್ಮ ಪಕ್ಷದವರನ್ನು ಶಾಸಕರನ್ನಾಗಿ ಮಾಡಲು ಶ್ರಮಿಸುತ್ತೇವೆ. ಕ್ಷೇತ್ರದ ಮುಖಂಡ ಯುವರಾಜ ಕದಂ ನಮ್ಮೊಂದಿಗೆ ಇದ್ದರು. ಆದರೆ, ಯಾವ ಪಕ್ಷಕ್ಕೆ ಹೋಗುತ್ತಾರೆಯೋ ಅವರ ವೈಯಕ್ತಿಕ ವಿಚಾರ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.